8. ಶ್ರೀಮತಿ ಅರ್ . ಅಂಬುಜಾಕ್ಷಿ , ಪುಲ್ಲುವನ್ ಪಾಟ್ಟು ಹಾಡುಗಾರ್ತಿ , ಕೇರಳ ರಾಜ್ಯ . ಅವರಿಗೆ

ನಾಗಕಳಂ ಕೇರಳದ ಅತ್ಯಂತ ಪ್ರಾಚೀನ ಧಾರ್ಮಿಕ ಕಲೆ. ಸಂಘಮ್ ಕಾಲದಿಂದಲೂ ಈ ಆಚರಣೆ ಪ್ರಚಲಿತದಲ್ಲಿದೆ ಎನ್ನಲಾಗುತ್ತಿದೆ. ನಾಗ ದೇವಸ್ಥಾನಗಳಲ್ಲಿ ಪ್ರಕೃತಿದತ್ತವಾದ ಐದು ಬಣ್ಣಗಳ ಪುಡಿಯಿಂದ ಕಲಂ-ರಂಗೋಲಿಯಲ್ಲಿ ಸರ್ಪವನ್ನು ಮೆಚ್ಚಿಸಲು ಪೂಜೆ – ಆರಾಧನೆಯೊಂದಿಗೆ ವಿಶಿಷ್ಟವಾಗಿ ನೃತ್ಯ ಪೂಜೆ ಆಚರಿಸಲಾಗುತ್ತದೆ. ಸರ್ಪ ತುಳ್ಳಲ್ (ಹಾವುಗಳ ನೃತ್ಯ) ಥಿರಿಯುಜಿಚಿಲ್ (ಬೆಂಕಿ ನೃತ್ಯ) – ನೃತ್ಯಗಳನ್ನು ವಿಶೇಷವಾಗಿ ದೇವಸ್ಥಾನಗಳಲ್ಲಿ ಅಥವಾ ಹಳೆಯ ವಾಡೆಗಳಲ್ಲಿ ಪುಲ್ಲುವ ಪಾಟ್ಟು ಹಾಡುಗಳನ್ನು ಹಾಡುತ್ತ, ಸರ್ಪವನ್ನು ಸಮಾಧಾನ ಪಡಿಸುವ ರೀತಿಯಲ್ಲಿ ಕುಟುಂಬದ ಯೋಗ ಕ್ಷೇಮಕ್ಕಾಗಿ ಸರ್ಪ ದೇವರುಗಳ ಪೂಜೆ ಮಾಡಲಾಗುತ್ತದೆ. ಪುಲ್ಲುವನ್ ಸಮುದಾಯದವರಿಗೆ ಸರ್ಪಗಳ ಆಚರಣೆ ಮಾಡುವುದರಿಂದ ನಾಗಮಂಪಾಟಿಕಲ್ ಎಂದು ಕರೆಯುತ್ತಾರೆ.

ಕೇರಳದಲ್ಲಿ ಪುಲ್ಲುವನ್ ಪಾಟ್ಟು ಸರ್ಪಕಳಂ, ನಾಗಪಾಟ್ಟು ಎಂದು ಕರೆಯುವ ಈ ಪ್ರಾಚೀನ ದೈವಿ ಕಲೆಯನ್ನು ಪುಲ್ಲುವ ಸಮುದಾಯದ ಜನರು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಬಂದಿದ್ದಾರೆ. ಅವರಲ್ಲಿ ಪ್ರಮುಖ ಹೆಸರು ಶ್ರೀಮತಿ ಆರ್. ಅಂಬುಜಾಕ್ಷಿ. ಇವರ ಪತಿ ದಿವಂಗತ ಶ್ರೀ ಅಚ್ಚುತನ್ ಸಹ ಪ್ರಸಿದ್ಧ ಕಲಾವಿದರು. ಈಗ ಮಕ್ಕಳಾದ ಜ್ಯೋತಿಲಕ್ಷಿ, ಮಗ   ಸುಧೀರ್ ಮತ್ತು ಶ್ರೀಕಾಂತ್ ಸಹ ಪುಲ್ಲುವ ಪಾಟ್ಟು ಕಲಾವಿದರಾಗಿ ಹೆಸರು ಮಾಡಿದ್ದಾರೆ. ಪೂಜೆಯಲ್ಲಿ ಅವರು ಸರ್ಪವು ಜೀವಂತವಾಗಿದೆ ಎನ್ನುವಂತೆ ತಾವೇ ಸರ್ಪವಾಗಿ ಅನುಭವಿಸಿ ಹಾಡು ನೃತ್ಯಗಳನ್ನು ಮಾಡಿ ವಿಶೇಷ ವಾದ್ಯದೊಂದಿಗೆ ಪೂಜೆ ಮಾಡುತ್ತಾರೆ. ಈ ಆಚರಣೆಗೆ ಫಲವಂತಿಕೆಯ ಆಚರಣೆ ಎಂದು ಕರೆಯುತ್ತಾರೆ. ಸರ್ಪಾರಾಧನೆಯಿಂದ ಕುಟುಂಬ ಕಲ್ಯಾಣ, ಸಂತಾನ ಬಯಕೆ ಮತ್ತು ರೋಗ-ರುಜಿನೆಗಳ ನಿವಾರಣೆ ಆಗುತ್ತದೆ ಎಂದು ಭಕ್ತಾಧಿಗಳು ನಂಬಿರುತ್ತಾರೆ. ಈ ನೃತ್ಯ ಪೂಜೆಯಲ್ಲಿ ಪುಲ್ಲುವರು ಹಾಡುಗಳನ್ನು ಹಾಡುತ್ತಾ ಪುಲ್ಲುವ ಕುಟಮ್ ವಾದ್ಯ, ಇಳತಾಳಂ ಪುಲ್ಲುವ ವೀಣೆಗಳನ್ನು ಬಳಸುತ್ತಾರೆ.

   ಶ್ರೀಮತಿ ಅಂಬುಜಾಕ್ಷಿ ಅವರು ೧೯೬೧ರಿಂದಲೂ ಪುಲ್ಲುವನ್ ಪಾಟ್ಟು ಕಲಾ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಶದ ವಿವಿದೆಡೆ ಕಲಾ ಪ್ರದರ್ಶನ ಮಾಡಿದ್ದಾರೆ. ಕೇರಳದ ಜಾನಪದ ಅಕಾಡೆಮಿ ಫೆಲೋಷಿಪ್, ಜಾನಪದ ಅಕಾಡೆಮಿ ಪ್ರಶಸ್ತಿ, ಪ್ರವಾಸೋದ್ಯಮ ನಿಗಮದ ಉತ್ಸವಂ ಪ್ರಶಸ್ತಿ – ಹೀಗೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿದೆ. ಆಕಾಶವಾಣಿ ಕಲಾವಿದರೂ ಆಗಿರುವ ಇವರಿಗೆ ಇವರ ಜೀವಮಾನದ ಸಾಧನೆಗಾಗಿ ತನ್ನ ಪರಂಪರೆಯನ್ನು ಮುಂದಿನ ಪೀಳಿಗೆಗಾಗಿ ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ೨೦೨೨ನೇ ಸಾಲಿನ ಒಂದು ಲಕ್ಷ ರೂ. ಮೌಲ್ಯದ “ನಾಡೋಜ ಎಚ್. ಎಲ್. ನಾಗೇಗೌಡರಾಷ್ಟೀçಯ ಪ್ರಶಸ್ತಿಯನ್ನು ದಿನಾಂಕ: ೧೪/೧೨/೨೦೨೨ರ ಬುಧವಾರ ಬೆಳಗ್ಗೆ ೧೧.೦೦ ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅತ್ಯಂತ ಸಂಭ್ರಮದಲ್ಲಿ ನೀಡಿ ಗೌರವಿಸಲಾಯಿತು.

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


ಚಿಣ್ಣರ ಬೇಸಿಗೆ ಶಿಬಿರ

This will close in 50 seconds