ಜಾನಪದ ಮಹಾವಿದ್ಯಾಲಯ
ಕರ್ನಾಟಕ ಜಾನಪದ ಪರಿಷತ್ತು ನಾಡಿನ ಜನಪದ ಸಂಸ್ಕೃತಿಯ ವಿಕಾಸಕ್ಕಾಗಿ ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡಿದೆ. ಈ ದಿಸೆಯಲ್ಲಿ ತನ್ನ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಪಸರಿಸುವಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದೆ. ಈ ಎಲ್ಲ ಚಟುವಟಿಕೆಗಳ ಮುಂದುವರಿಕೆಯಾಗಿ‘ಜಾನಪದ ಮಹಾವಿದ್ಯಾಲಯ’ ಎಂಬ ಹೆಸರಿನಲ್ಲಿಅಧ್ಯಯನಾಂಗವನ್ನು ರಚಿಸಿರುತ್ತದೆ. ಜಾನಪದವನ್ನು ಒಂದು ಪ್ರಬುದ್ಧ ಅಧ್ಯಯನ ಶಿಸ್ತನ್ನಾಗಿ ರೂಪಿಸುವುದು. ಜಾನಪದ ಪರಿಷತ್ತಿನ ಅಧ್ಯಯನಾಂಗದ ಉದ್ದೇಶವಾಗಿದೆ. ಕರ್ನಾಟಕ ಜಾನಪದಕ್ಕೆ ಸಮರ್ಥ ತಾತ್ವಿಕ ಭಿತ್ತಿಯನ್ನು ಸಂಯೋಜಿಸಿ, ಜನಪದ ಅಧ್ಯಯನದಲ್ಲಿ ಆಸಕ್ತಿ ಇರುವವರಿಗಾಗಿ ಈ ಅಧ್ಯಯನಾಂಗ ಶ್ರಮಿಸುತ್ತದೆ.
ಈಗಾಗಲೇ ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯಗಳು ಹಾಗೂ ಜನಪದ ಅಧ್ಯಯನಗಳನ್ನು ನಡೆಸುತ್ತಿರುವ ಸಂಸ್ಥೆಗಳ ಅಧ್ಯಯನದ ಸ್ವರೂಪವನ್ನು ಗಮನಕ್ಕೆ ತಂದುಕೊಂಡು ವಿಶಿಷ್ಟ ರೀತಿಯ ಅಧ್ಯಯನಾಂಗವನ್ನುಕಟ್ಟುವಕಾರ್ಯದಲ್ಲಿ ಮುನ್ನೆಡೆಯುವುದು ಪರಿಷತ್ತಿನ ಗುರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಜಾನಪದ ಅಧ್ಯಯನ ಜಗತ್ತಿನಾದ್ಯಂತ ಹೆಚ್ಚು ಗಂಭೀರವಾಗಿ ಪರಿಗಣನೆಗೆ ಗುರಿಯಾಗುತ್ತಿದೆ. ಬೇರೆ ಬೇರೆ ಜ್ಞಾನ ಶಾಖೆಗಳು ಜಾನಪದ ಅಧ್ಯಯನಕ್ಕೆ ಪೂರಕವಾಗಿ ಒದಗಿ ಬರುತ್ತಿವೆ. ಮಾನವಶಾಸ್ತ್ರ, ಸಮಾಜಶಾಸ್ತ್ರ, ಭಾಷಾಶಾಸ್ತ್ರಜ್ಞರ ಹಾಗೂ ಸಂವಹನಶಾಸ್ತ್ರ ಇವು ಜಾನಪದ ಅಧ್ಯಯನಕ್ಕೆ ಹೊಸ ಸೂಕ್ಷ್ಮತೆಗಳನ್ನು ತಂದುಕೊಡುತ್ತಿವೆ. ಅಲ್ಲದೆ ಸಂಶೋಧನೆಯ ವಿಧಿವಿಧಾನಗಳು ಕ್ಷೇತ್ರಕಾರ್ಯದ ಹೊಸ ಅವಿಷ್ಕಾರಗಳು ಬಳಕೆಗೆ ಬರುತ್ತಿವೆ. ವೈಜ್ಞಾನಿಕ ಉಪಕರಣಗಳ ನೆರವು ಜನಪದ ಅಧ್ಯಯನಕ್ಕೆ ಹೊಸ ತಿರುವನ್ನು ಒದಗಿಸಿಕೊಡುತ್ತಿದೆ. ಜನಪದ ಅಧ್ಯಯನ ಆಧುನೀಕರಣಗೊಂಡು ಈವತ್ತಿನ ಬದುಕಿನ ಅವಿಭಾಜ್ಯ ಭಾಗವಾಗಿ ಕ್ರಿಯಾಶೀಲಗೊಂಡಿದೆ. ಈ ಎಲ್ಲವನ್ನು ಗಮನಕ್ಕೆ ತಂದುಕೊಂಡು ಅಧ್ಯಯನಾಂಗವನ್ನು ಬೆಳೆಸಲು ಪರಿಷತ್ತು ಮುಂದಡಿಇಡುತ್ತದೆ
ನಾಡೋಜ ಶ್ರೀ ಎಚ್.ಎಲ್. ನಾಗೇಗೌಡರು 1979ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕಳೆದ 43 ವರ್ಷಗಳಿಂದಲೂ ಅಪಾರ ಹಾಗೂ ವೈವಿಧ್ಯಮಯ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದೆ. ಇದಕ್ಕೆ ಕರ್ನಾಟಕದ, ಭಾರತದ ಹಾಗೂ ಬೇರೆ ಬೇರೆ ದೇಶಗಳ ಜಾನಪದ ವಿದ್ವಾಂಸರ ಮಾರ್ಗದರ್ಶನವುಒದಗಿ ಬಂದಿದೆ. ಈಗಾಗಲೇ ಅಪಾರ ಧ್ವನಿಮುದ್ರಣ ಸಂಗ್ರಹ, ವಿಡಿಯೋ ಚಿತ್ರೀಕರಣ, ವರ್ಣಪಾರದರ್ಶಿಕೆ(ಸ್ಲೈಡ್)ಗಳ ಸಂಗ್ರಹ, ವಸ್ತುಸಂಗ್ರಹಾಲಯ, ಪುಸ್ತಕ ಭಂಡಾರ ಇವುಗಳು ಜನಪದ ಪರಿಷತ್ತಿನ ಅಮೂಲ್ಯ ಸಂಗ್ರಹಗಳಲ್ಲಿ ಸೇರಿವೆ. ಎಲ್ಲವು ಅಧ್ಯಯನಾಂಗದ ಬೆಳವಣಿಗೆಗೆ ಹಿನ್ನೆಲೆಯಾಗಿವೆ.
ಜಾನಪದ ಮಹಾವಿದ್ಯಾಲಯವು ‘ಜಾನಪದ ಸರ್ಟಿಫಿಕೇಟ್’ ಮತ್ತು ‘ಜಾನಪದ ಡಿಪ್ಲೊಮಾ’ ಕೋರ್ಸ್‍ಗಳನ್ನು ದಶಕಕ್ಕೂ ಹೆಚ್ಚು ಕಾಲದಿಂದ ನಡೆಸಿಕೊಂಡು ಬರಲಾಗುತ್ತಿದೆ. ತರಗತಿಗಳು ಪ್ರತಿ ಭಾನುವಾರಗಳಂದು ಮಾತ್ರ ನಡೆಯುತ್ತವೆ. ಹಾಗಾಗಿ ನೃತ್ಯ, ಸಂಗೀತ, ರಂಗಭೂಮಿ, ಚಿತ್ರಕಲೆಗಳ ಕುರಿತುಅಭ್ಯಾಸದಲ್ಲಿ ತೊಡಗಿರುವವರು ಕಲೆ, ವಿಜ್ಞಾನ-ವಾಣಿಜ್ಯ ಪದವಿಪೂರ್ವ, ಪದವಿ, ಸ್ನಾತಕೋತ್ತರ ಮೊದಲಾದ ಕಾಲೇಜು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು, ಗಾಯಕರು, ಕುಣಿತಾಸಕ್ತರು ಇನ್ನು ಮೊದಲಾದ ಆಸಕ್ತರು ಈ ಕೋರ್ಸ್‍ಗಳ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಜಾನಪದದ ಕುರಿತ ಅಭ್ಯಾಸವೆಂದರೆ ಪರಂಪರೆಯ ಜ್ಞಾನ-ವಿಜ್ಞಾನದ ಅಭ್ಯಾಸವೇ ಆಗಿರುತ್ತದೆ. ಬಹುಮುಖಿ ಜ್ಞಾನದ ತಿಳುವಳಿಕೆಯ ಕೋರ್ಸ್‍ಗಳು ಇವಾಗಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಜನಪದ/ಸಂಸ್ಕøತಿಯ ಅರಿವಿಗೆ ಕೋರ್ಸ್‍ಗಳು ಅತ್ಯುಪಯುಕ್ತವಾಗಲಿವೆ.
ಪ್ರಾಯೋಗಿಕ ತರಬೇತಿ
- ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಜನಪದ ಕಲೆಗಳ ಪ್ರಾಯೋಗಿಕ ತರಬೇತಿಯಲ್ಲಿ ಪಾಲ್ಗೊಳ್ಳಬೇಕು.
- ಜನಪದ ಆಟಗಳಲ್ಲಿ ಭಾಗವಹಿಸಬೇಕು.
- ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದಲ್ಲಿ ನಡೆಸುವ ಕಮ್ಮಟ ಶಿಬಿರಗಳಲ್ಲಿ ಭಾಗವಹಿಸಬೇಕು
ಸೌಲಭ್ಯ
- ಉತ್ತಮ ಗ್ರಂಥಾಲಯ ವ್ಯವಸ್ಥೆಇದೆ.
- ಆಡಿಯೋ-ವಿಡಿಯೋ-ಸ್ಲೈಡ್ ಪ್ರದರ್ಶನವಿದೆ.
- ಒಳಾಂಗಣ ಮತ್ತು ಹೊರಾಂಗಣ ವಸ್ತುಸಂಗ್ರಹಾಲಯಗಳು
- ಪ್ರತಿ ಭಾನುವಾರವು ಜಾನಪದ ಲೋಕದಲ್ಲಿ ಜನಪದ ಕಲಾಪ್ರದರ್ಶನ.
- ಲೋಕೋತ್ಸವ-ದಸರಾ ಉತ್ಸವಗಳಂತಹ ಹೊರರಾಜ್ಯಗಳ ಜನಪದ ಕಲಾ ಪ್ರದರ್ಶನ ಉತ್ಸವಗಳು.
ಜಾನಪದ ಸರ್ಟಿಫಿಕೇಟ್
ಅರ್ಹತೆ:
ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿರಬೇಕು.
ಜಾನಪದ ಸರ್ಟಿಫಿಕೇಟ್ ಮತ್ತು ಡಿಪ್ಲೋಮ ಕೋರ್ಸ್
ಭಾರತೀಯ ಪರಂಪರೆಯಲ್ಲಿ ಮತ್ತು ಜನಪದರಲ್ಲಿ ಶಿಕ್ಷಣವೆಂದರೆ ಬದುಕು ಎಂದು ತಿಳಿದಿರುವುದು. ಅದು ಏಕಮುಖಿಯಲ್ಲಿ ಬಹುಮುಖಿ. ಬೇರೆ ಶಿಕ್ಷಣ ಪದವಿಗಳಿಗಿಂತ ಜಾನಪದ ಲೋಕದಲ್ಲಿ ನೀಡುವ ಶಿಕ್ಷಣ ವಿಭಿನ್ನವಾಗಿದೆ. 1999ರ ಆರಂಭದಿಂದಲೂ ಜಾನಪದ ಮಹಾವಿದ್ಯಾಲಯ ಒಟ್ಟು ಬದುಕನ್ನು ಕುರಿತ ಜಾನಪದ ಶಿಕ್ಷಣವನ್ನು ಕೊಡುತ್ತಾ ಬಂದಿದೆ. ಜಾನಪದದಲ್ಲಿ ಸರ್ಟಿಫಿಕೇಟ್ ಮತ್ತು ಜಾನಪದ ಡಿಪ್ಲೋಮಾ ತರಗತಿಗಳನ್ನು ಶುರುಮಾಡಿದೆ. ಬೇರೆ ಕೋರ್ಸ್‍ಗಳಂತೆ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕೂರಿಸಿಕೊಂಡು ಅಕ್ಷರದ ಮೊಳೆಗಳನ್ನು ಹೊಡೆಯಲಿಲ್ಲ. ಶಿಕ್ಷಣವೆಂದರೆ ಒಟ್ಟು ದೇಹದ ಕ್ರಿಯಾಶೀಲತೆ. ಅಲ್ಲಿ ಮನಸ್ಸು ಚಲಿಸಬೇಕು, ದೇಹವೂ ಶಕ್ತವಾಗಬೇಕು. ಆ ನಿಟ್ಟಿನಲ್ಲಿ ಒಂದು ದಿನದಲ್ಲಿ ಅರ್ಧ ದಿನ ಪಾಠ, ಉಳಿದ ಅರ್ಧ ದಿನ ಜನಪದ ಕಲೆ, ಸಾಹಿತ್ಯ, ಸಂಗೀತ, ಅಭಿನಯ ಮತ್ತು ಅಲಂಕರಣ ಪ್ರಾತ್ಯಕ್ಷಿಕೆಯನ್ನು ಕಲಿಸುತ್ತ ಜನಪದ ಚೈತನ್ಯದ ಜೊತೆಗೆ ಒಡನಾಡುವುದನ್ನು ಕಲಿಸುತ್ತಾ ಬರಲಾಗಿದೆ. ಆದುದರಿಂದಲೇ ಜಾನಪದ ಲೋಕ-ಜಾನಪದ ಮಹಾವಿದ್ಯಾಲಯಕ್ಕೆ ಬರುವುದೆಂದರೆ ವಿದ್ಯಾರ್ಥಿಗಳು ಸಂಭ್ರಮಿಸುತ್ತಾರೆ. ಹೊರಗಿನ ಲೋಕದಿಂದ ಒಳಗಿನ ಅಂತರಂಗ ಲೋಕಕ್ಕೆ ಬಂದಂತೆ ಪುಳಕಿತರಾಗುತ್ತಾರೆ. ಕೂತು ಕಲಿತು ಸಾಕಾಗಿ, ನಿಂತು, ಕುಂತು, ಕುಣಿದು ಕಲಿಯುವ ಚೈತನ್ಯ ಶಿಕ್ಷಣಕ್ಕೆ ತಮ್ಮನ್ನು ಅರ್ಪಿಸಿಕೊಂಡು ಬಿಡುತ್ತಾರೆ. ಆದ್ದರಿಂಧ ಜಾನಪದ ಮಹಾವಿದ್ಯಾಲಯದ ಕಲಿಕೆ ಕೊಠಡಿ ಶಿಕ್ಷಣವಾಗದೆ ಲೋಕ ಶಿಕ್ಷಣವಾಗಿದೆ. ಮುದುಡಿದ ಮನಸ್ಸುಗಳನ್ನು ಮೆರೆಸುವ ಜನ ಶಿಕ್ಷಣವಾಗಿದೆ.
ಅರ್ಹತೆ:
- ಪಿ.ಯು.ಸಿ. ತೇರ್ಗಡೆ ಹೊಂದಿರಬೇಕು
- ಸಾಹಿತ್ಯ ಪರಿಷತ್ತಿನಜಾನಪದ ಪ್ರವೇಶಅಥವಾ ಪ್ರೌಢ ಪರೀಕ್ಷೆಯಲ್ಲಿಉತ್ತೀರ್ಣರಾದವರಿಗೂ ಪ್ರವೇಶಾವಕಾಶಇರುತ್ತದೆ.
- ಕನ್ನಡರತ್ನ ಪರೀಕ್ಷೆ, ಕನ್ನಡಡಿಪ್ಲೊಮಾ ಮತ್ತುತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆಆದವರಿಗೂ ಪ್ರವೇಶಾವಕಾಶಇರುತ್ತದೆ.
ಈ ಉದ್ದೇಶದಿಂದಲೇ ನಮ್ಮ ಶಿಕ್ಷಣದಿಂದ ಮತ್ತೊಂದು ನೆಲೆಗೆ ತೆಗೆದುಕೊಂಡು ಹೋಗಲು ಜಾನಪದ ಡಿಪೆÇ್ಲೀಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‍ಗಳನ್ನು ತೆರೆಯಲಾಗಿದ್ದು, ಜನಪದ ಗೀತೆ ಹಾಡುವುದನ್ನು ಕಲಿಸುವುದು , ರಂಗ ಪೂಜೆ , ಪಟಾಕುಣಿತ ಕಲಿಸುವುದು, ಕಲಾವಿದರೊಡನೆ , ಚಿಂತಕರೊಡನೆ ಒಡನಾಡುವುದು, ಪ್ರಶ್ನಿಸುವುದು, ಸಂವಾದ ಮಾಡುವುದನ್ನು ಕಲಿಸುವುದು, ಬಯಲಾಟದ ಪಾತ್ರ ತಿಳಿಸಿಕೊಡುವುದು, ಹೊಸ ಗಾದೆ ಒಗಟುಗಳಲ್ಲಿ ಪಾಲ್ಗೊಳ್ಳುವ ಮುಖಾಮುಖಿ ತಿಳುವಳಿಕೆ ನೀಡುವುದು – ಹೀಗೆ ಹೊಸ ಮುನುಷ್ಯನ ಹುಡುಗಾಟಕ್ಕೆ ಹೊರಟಿದೆ. ನಮ್ಮ ಸಂಸ್ಥೆ ಅದರಲ್ಲಿ ಭಾಗಿಯಾಗಬಹುದಾದ ಅವಕಾಶಕ್ಕಾಗಿ ಕಲಿಕಾರ್ಥಿಗಳನ್ನು ಆಹ್ವಾನಿಸುತ್ತೇವೆ.