ನಾಡಿನ ಜಾನಪದದ ಸಮಗ್ರ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಕರ್ನಾಟಕ ಜಾನಪದ ಪರಿಷತ್ತಿನ ಧ್ಯೇಯೋದ್ದೇಶಗಳು.
ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ ಉಳಿದುಕೊಂಡಿರುವ ನುಡಿಗಟ್ಟುಗಳು, ಆಡುಮಾತುಗಳು, ಹಾಡುಗಳು, ಗಾದೆಗಳು, ಕಥೆಗಳು, ಬಯಲಾಟ ಪ್ರಸಂಗಗಳು – ಹೀಗೆ ಎಲ್ಲ ಬಗೆಯ ಜನಪದ ಸಾಹಿತ್ಯ ಸಂಗ್ರಹ, ಸಂರಕ್ಷಣೆ, ಪರಿಷ್ಕಾರ ಮತ್ತು ಪ್ರಸಾರ; ಮುಖ್ಯವಾಗಿ, ಜಾನಪದ ಪತ್ರಿಕೆ, ಶಬ್ದಕೋಶ ಮತ್ತು ವಿಶ್ವಕೋಶಗಳ ಪ್ರಕಟಣೆ.
ಹಳ್ಳಿಗರ ವೇಷಭೂಷಣಗಳ, ಸಾಧನ ಸಲಕರಣೆಗಳು, ಬಳಕೆಯ ವಸ್ತುಗಳು ಇತ್ಯಾದಿಗಳ ಸಂಗ್ರಹವೇ ಅಲ್ಲದೆ ಇಡೀ ಗ್ರಾಮೀಣ ಬದುಕನ್ನು ಜೀವಂತವಾಗಿ ಚಿತ್ರಿಸುವ ಬೃಹತ್ ವಸ್ತುಸಂಗ್ರಹ ಕೇಂದ್ರಗಳ (museums) ಸ್ಥಾಪನೆ.
ಜಾನಪದದ ಮೌಲ್ಯಗಳ ಬಗ್ಗೆ ಆಧುನಿಕರಲ್ಲಿ ಆಸಕ್ತಿ ಬೆಳೆಸಲು ಅಧ್ಯಯನ ವಿಷಯಕ್ಕೆ ಜಾನಪದವನ್ನೇ ವಿಶೇಷವಾಗಿ ಆರಿಸಿಕೊಂಡು ಅತ್ಯಧಿಕ ಅಂಕಗಳನ್ನು ಗಳಿಸುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದು. ಶಾಲಾ ಕಾಲೇಜುಗಳಲ್ಲಿ ಜಾನಪದ ವಿಷಯಗಳನ್ನು ಕುರಿತು ಸೋದಾಹರಣ ಉಪನ್ಯಾಸ ವ್ಯವಸ್ಥೆ ಮತ್ತು ಜನಪ್ರಿಯ ಕಿರು ಪ್ರಕಟಣೆಗಳನ್ನು ಹೊರತರುವುದು.
ಜನಪದ ಸಂಗೀತದ ವೈವಿಧ್ಯಪೂರ್ಣ ಧಾಟಿಗಳ ಧ್ವನಿಮುದ್ರಣ, ಧ್ವನಿಮುದ್ರಿತ ಟೇಪುಗಳ ಭಂಡಾರ ಸ್ಥಾಪನೆ, ಶಾಸ್ತ್ರೀಯ ಸಂಗೀತಕ್ಕೆ ಜನಪದ ಸಂಗೀತ ನೀಡಿರುವ ಕಾಣಿಕೆ ಕುರಿತು ನಡೆಸುವ ಸಂಶೋಧನೆಗೆ ನೆರವು, ಮೂಲ ಜನಪದ ಧಾಟಿಗಳನ್ನು ಜನಪ್ರಿಯಗೊಳಿಸಿ ಗ್ರಾಮಾಫೋನ್ ರಿಕಾರ್ಡುಗಳನ್ನು ಮತ್ತು ಕ್ಯಾಸೆಟ್‍ಗಳನ್ನು ಮಾಡಿಸುವುದು ಇತ್ಯಾದಿ.
ಜನಪದ ಕಲೆಗಳ ಸೊಬಗನ್ನು ಪರಿಚಯ ಮಾಡಿಕೊಡಲು ಅಲ್ಲಲ್ಲಿ ಜನಪದ ಕಲೆಗಳ ಪ್ರದರ್ಶನ ವ್ಯವಸ್ಥೆ, ಅಂತಹ ಪ್ರದರ್ಶನಗಳ ವ್ಯವಸ್ಥಾಪಕರಿಗೆ ನೆರವು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಯೋಜನೆಗಳಲ್ಲಿ ಜನಪದ ಕಲಾತಂಡಗಳಿಗೆ ಅವಕಾಶ ಕಲ್ಪಿಸುವುದು, ಸಮೂಹ ಶಿಕ್ಷಣ ಹಾಗೂ ಮನರಂಜನೆಯ ಉದ್ದೇಶಕ್ಕೆ ಜನಪದ ಗೀತ-ನೃತ್ಯ ರೂಪಕಗಳ ರಚನೆ ಹಾಗೂ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುವುದು.
ಹಳ್ಳಿಯ ವ್ಯಕ್ತಿ-ವಸ್ತುಗಳು, ತೇರು – ಜಾತ್ರೆಗಳು, ಮದುವೆ – ಮುಂಜಿಗಳು, ಹಬ್ಬ- ಹುಣ್ಣಿಮೆಗಳು, ಸಂಸ್ಕಾರ – ಸಂಪ್ರದಾಯಗಳು, ಸಾಮಾಜಿಕ ಆಚರಣೆಗಳು – ಈ ಮೊದಲಾದವುಗಳ ಸ್ಥಿರ ಹಾಗೂ ಸಾಕ್ಷ್ಯ ಚಿತ್ರಗಳ ತಯಾರಿಕೆ.
ಜಾನಪದ ವಿಚಾರ ಗೋಷ್ಠಿಗಳು, ಕಲಾಮೇಳಗಳು, ಸ್ಪರ್ಧೆಗಳು, ವಸ್ತು ಪ್ರದರ್ಶನ ಮೊದಲಾದುವುಗಳನ್ನು ಏರ್ಪಡಿಸುವುದು.
ಜಾನಪದ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಪ್ರತಿಭಾವಂತ ವ್ಯಕ್ತಿಗಳನ್ನು ಟ್ರಸ್ಟಿನ ವಾರ್ಷಿಕ ಸಮಾರಂಭ ಸಂದರ್ಭದಲ್ಲಿ ಸನ್ಮಾನಿಸುವುದು; ಕಷ್ಟದಲ್ಲಿರುವ ಜನಪದ ಕಲಾವಿದರಿಗೆ, ಕ್ಷೇತ್ರಕಾರ್ಯಕರ್ತರಿಗೆ ಸರ್ಕಾರದಿಂದ ಮಾಸಾಶನ, ಗೌರವಧನ, ನಿರ್ವಹಣಾ ವೆಚ್ಚ ಇತ್ಯಾದಿ ನೆರವು ದೊರಕಿಸಿಕೊಡುವುದು.
ಜನಪದ ಗೀತೆ, ನೃತ್ಯ, ಯಕ್ಷಗಾನ – ಬಯಲಾಟಗಳನ್ನು ರೇಡಿಯೋ ಮತ್ತು ಟಿ.ವಿ.ಗಳಲ್ಲಿ ಪ್ರಸಾರ ಮಾಡಲು ಅನುಕೂಲವಾಗುವಂತೆ ಕಲಾವಿದರನ್ನು ತರಬೇತುಗೊಳಿಸಿ ಅವರಿಗೆ ಆ ಪ್ರಸಾರ ಮಾಧ್ಯಮಗಳಲ್ಲಿ ಅವಕಾಶಗಳನ್ನು ಒದಗಿಸುವುದು.
ಜನಪದ ಕಲೆಗಳನ್ನು ಕಲಿಸುವುದಕ್ಕಾಗಿ ಒಂದು ಕಲಾಶಾಲೆಯನ್ನು ತೆರೆಯಲಾಗಿದೆ.
ಈ ಎಲ್ಲಾ ಚಟುವಟಿಕೆಗಳನ್ನು ನಡೆಸಲು ಬೆಂಗಳೂರಲ್ಲಿ ಒಂದು ‘ಜಾನಪದ ಕೇಂದ್ರ’ವನ್ನು ಸ್ಥಾಪಿಸುವುದು ಮತ್ತು ಅದಕ್ಕೆ ಬೇಕಾದ ಸೂಕ್ತ ಜಾಗವನ್ನು ಪಡೆದು ಕಟ್ಟಡದ ನಿರ್ಮಾಣವನ್ನು ಕೈಗೊಳ್ಳುವುದು.