ಕರ್ನಾಟಕ ಜಾನಪದ ಪರಿಷತ್ತಿನ ಸಾಧನೆಗಳು
ಕನ್ನಡ ನಾಡಿನ ಜಾನಪದ ಪರಂಪರೆಯ ಸಂವರ್ಧನೆ, ಸಂರಕ್ಷಣೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಧಾನ ಆಶಯಗಳನ್ನಾಗಿರಿಸಿಕೊಂಡು ಮಾರ್ಚ್ 21, 1979ರಂದು ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ತು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸಾಧನೆಯ ಮೈಲಿಗಲ್ಲುಗಳನ್ನೇ ನಿರ್ಮಿಸಿದೆ.
- ಜನಪದ ಮೂಲ ಗಾಯಕರು ನೂರೆಂಟು ಧಾಟಿಗಳಲ್ಲಿ ಹಾಡಿರುವ ನೂರಾರು ಗಂಟೆಗಳಷ್ಟು ಕಾಲ ಕೇಳಬಹುದಾದ ಜನಪದ ಗೀತ ಸಾಹಿತ್ಯದ ಧ್ವನಿಮುದ್ರಣ.
- ಜನಪದ ವಾದ್ಯಗಳು, ತೊಗಲುಗೊಂಬೆ, ಸೂತ್ರದ ಗೊಂಬೆಗಳು, ಆಟದ ಸಾಮಾನುಗಳು, ಮನೆಬಳಕೆ ವಸ್ತುಗಳು, ಹಳೆಯ ಕಾಲದ ಆಭರಣ ಹಾಗೂ ಉಡುಪುಗಳು, ಆಯುಧಗಳು, ಮಣ್ಣಿನ ಕಲಾತ್ಮಕಗಳು ವಸ್ತುಗಳು, ಯಕ್ಷಗಾನ ಮುಂತಾದ ಪ್ರದರ್ಶನೀಯ ಕಲೆಗಳ ಆಳೆತ್ತರದ ವಿಗ್ರಹಗಳು, ಮುಖವಾಡಗಳು, ಛಾಯಾಚಿತ್ರಗಳು, ಚಿತ್ರಕಲೆಗಳು, ಇನ್ನಿತರ ಜಾನಪದ ವಸ್ತುಗಳು – ಇವುಗಳನ್ನು ಒಳಗೊಂಡ ಮ್ಯೂಸಿಯಂ ಸ್ಥಾಪನೆ.
- ಜನಪದರ ಜೀವನ, ಹಬ್ಬಹರಿದಿನಗಳು, ಆಚರಣೆ, ಕುಣಿತಗಳು, ಯಕ್ಷಗಾನ, ತೊಗಲುಗೊಂಬೆ ಮತ್ತು ಸೂತ್ರದಗೊಂಬೆ ಆಟಗಳು, ಸಣ್ಣಾಟ ಮತ್ತು ಕೃಷ್ಣ ಪಾರಿಜಾತ ನಾಟಕಗಳು, ಆಟೋಟಗಳು, ವಸ್ತು ವಿಶೇಷಗಳು, ವಾದ್ಯಗಳು – ಹೀಗೆ ಜನಪದ ಸಂಸ್ಕೃತಿಯ ವಿವಿಧ ಪ್ರಕಾರಗಳ ವಿಡಿಯೋ ಚಿತ್ರೀಕರಣ.
- ಮೇಲ್ಕಂಡ ಅಂಶಗಳಿಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ವರ್ಣ ಪಾರದರ್ಶಿಕೆಗಳ ತಯಾರಿಕೆ.
- ಕರ್ನಾಟಕ ಜಾನಪದ ಅಧ್ಯಯನ, ಸಂಶೋಧನೆ, ವಿಚಾರ, ವಿಮರ್ಶೆ – ವಿಶ್ಲೇಷಣೆಗಳಿಗೆಂದೇ ಮೀಸಲಾದ ಜಾನಪದ ಪತ್ರಿಕೆ ‘ಜಾನಪದಜಗತ್ತು’ ಪ್ರಕಟಣೆ.
- ಜಾನಪದ ಅಭ್ಯಾಸಕ್ಕೂ ಸಂಶೋಧನೆಗೂ ಸಹಾಯವಾಗುವ ಅಮೂಲ್ಯ ಗ್ರಂಥಭಂಡಾರ.
- ಹಲವಾರು ಜನಪದ ಕಲಾ ಮಹೋತ್ಸವಗಳು ಮತ್ತು ವಿಚಾರ ಸಂಕಿರಣಗಳ ಏರ್ಪಾಡು.
- ಜನಪದ ಕಲಾವಿದರಿಗೆ ಸನ್ಮಾನ ಹಾಗೂ ಧನ ಸಹಾಯದ ಮೂಲಕ ಪ್ರೋತ್ಸಾಹ.
- ಧ್ವನಿ ಮುದ್ರಣ, ವಿಡಿಯೋ ಚಿತ್ರೀಕರಣ, ಸ್ಲೈಡ್ ತಯಾರಿಕೆ ಮತ್ತು ಪ್ರದರ್ಶನಗಳಿಗೆ ಅಗತ್ಯವಾದ ಯಂತ್ರೋಪಕರಣ ಮತ್ತು ಸಾಧನ ಸಲಕರಣೆಗಳನ್ನು ಒಳಗೊಂಡ ಸೋಬಾನೆ ಚಿಕ್ಕಮ್ಮ ಸ್ಟುಡಿಯೋ ನಿರ್ಮಾಣ
- ಮೂಲ ಗಾಯಕರ ಸಾಹಿತ್ಯ ದನಿ, ಧಾಟಿ, ಮಟ್ಟುಗಳಲ್ಲಿ ಹಾಡಿದ ಹಾಡುಗಳಿಗೆ ಸೂಕ್ತ ವಾದ್ಯ ಸಂಯೋಜನೆ ಮಾಡಿ ನವ್ಯ ಗಾಯಕರಿಂದ ಹಾಡಿಸಿದ ಕ್ಯಾಸೆಟ್‍ಗಳ ತಯಾರಿಕೆ ಮತ್ತು ಮಾರಾಟ.
- ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ ಜಾನಪದ ಸಂಶೋಧನಾ ಕೇಂದ್ರ ಮತ್ತು ಜಾನಪದ ಮಹಾವಿದ್ಯಾಲಯಗಳ ಆರಂಭ,
- ಬೆಂಗಳೂರು ದೂರದರ್ಶನದಲ್ಲಿ ಸಿರಿಗಂಧ ಧಾರಾವಾಹಿಯ 108 ಸಂಚಿಕೆಗಳ ಪ್ರಸಾರ,
- ಜಾನಪದ ಕೃತಿಗಳ ಪ್ರಕಟಣೆ
- ಜನಪದ ಕುಣಿತಗಳ ತರಬೇತಿ
- ಜನಪದ ಗೀತಗಾಯನ ತರಬೇತಿ.
- ಮೂಡಲಪಾಯ ಯಕ್ಷಗಾನ ತರಬೇತಿ
- ಸುಮಾರು ಮುನ್ನೂರಕ್ಕೂ ಹೆಚ್ಚು ಜನಪದ ಕಲಾವಿದರಿಗೆ ಪ್ರಶಸ್ತಿಗಳ ಪ್ರದಾನ.
- ಗಾಳಿಪಟ ಉತ್ಸವ, ದಸರಾ ಉತ್ಸವ, ಲೋಕೋತ್ಸವ ಮೊದಲಾದ ಸ್ಥಾಯೀ ಉತ್ಸವಗಳ ನಿರ್ವಹಣೆ.
- ಇವೆಲ್ಲಕ್ಕೂ ಕಲಶವಿಟ್ಟಂತೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಮನಗರದ ಬಳಿ ಹದಿನೈದು ಎಕರೆ ಪ್ರದೇಶದಲ್ಲಿ ಪ್ರಸಿದ್ಧ ಗ್ರಾಮೀಣ ಸಾಂಸ್ಕೃತಿಕ ಕೇಂದ್ರವಾದ ಜಾನಪದ ಲೋಕದ ನಿರ್ಮಾಣ,
- ಬೆಂಗಳೂರಿನಲ್ಲಿ ಜಾನಪದ ಸಿರಿಭುವನ ನಿರ್ಮಾಣ ಮತ್ತು ನಂಜರಾಜ್ ಸಿರಿರಂಗ ಬಯಲು ರಂಗಮಂದಿರ ನಿರ್ಮಾಣ.
ಹೀಗೆ ಪರಿಷತ್ತು ಹತ್ತು ಹಲವು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ನಿರಂತರವಾಗಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಾ ಬಂದಿದೆ.