ನಾಡೋಜ ಶ್ರೀ ಎಚ್.ಎಲ್. ನಾಗೇಗೌಡರು
ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಒಬ್ಬರಾದ ಎಚ್.ಎಲ್. ನಾಗೇಗೌಡರದು ಬಹುಮುಖ ಪ್ರತಿಭೆ. ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಅನುವಾದಕರಾಗಿ, ಜಾನಪದ ಸಂಗ್ರಾಹಕ, ಸಂಶೋಧಕರಾಗಿ, ನಿರ್ಮಾತೃವಾಗಿ ನಾಗೇಗೌಡರು ನಾಡಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಹೆರಗನಹಳ್ಳಿಯಲ್ಲಿ 1915ರ ಫೆಬ್ರವರಿ 11 ರಂದು ಜನಿಸಿದ ಎಚ್.ಎಲ್. ನಾಗೇಗೌಡರು ಬಿ.ಎಸ್ಸಿ., ಮತ್ತು ಎಲ್.ಎಲ್.ಬಿ., ಪದವಿಗಳನ್ನು ಪೂರೈಸಿ 1941ರಲ್ಲಿ ಮೈಸೂರು ಸಿವಿಲ್ ಸರ್ವಿಸ್ ಸ್ಪರ್ಧಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಗೆಜ್ಹೆಟೆಡ್ ಹುದ್ದೆಗೆ ಆಯ್ಕೆಯಾದರು. 1961ರಿಂದ 63ರ ವರೆಗೆ ಶಿವಮೊಗ್ಗ ಜಿಲ್ಲೆ ಜಿಲ್ಲಾಧಿಕಾರಿ, 63ರಿಂದ 65ರವರೆಗೆ ಚಿಕ್ಕಮಗಳೂರು ಜಿಲ್ಲೆ ಜಿಲ್ಲಾಧಿಕಾರಿ, 65ರಿಂದ 69ರವರೆಗೆ ದಕ್ಷಿಣಕನ್ನಡ ಜಿಲ್ಲೆ ಜಿಲ್ಲಾಧಿಕಾರಿ, 69ರಿಂದ 72ರವರೆಗೆ ಕಾರ್ಮಿಕ ಆಯುಕ್ತರು , 72ರಿಂದ 73 ಮುಜರಾಯಿ ಕಮೀಷನರ್, 73ರಿಂದ 79ರವರೆಗೆ ಲೋಕಸೇವಾ ಆಯೋಗದ ಸದಸ್ಯರಾಗಿ ಬಹುಮುಖಸೇವೆ ಸಲ್ಲಿಸಿದರು. ಗೌಡರು ತಾವು ನಿರ್ವಹಿಸಿದ ವಿವಿಧ ಉನ್ನತ ಹುದ್ದೆಗಳಲ್ಲಿ ಕರ್ತವ್ಯನಿಷ್ಠೆ, ಸಮಯ ಪ್ರಜ್ಞೆ, ಶಿಸ್ತು, ಮಾನವೀಯತೆಗಳಿಗೆ ಹೆಸರಾಗಿದ್ದರು.
ನಾಗೇಗೌಡರು ಮೂಲತಃ ಕಲಿತದ್ದು ವಿಜ್ಞಾನ ಮತ್ತು ನ್ಯಾಯಶಾಸ್ತ್ರಗಳನ್ನು; ಸೇರಿದ್ದು ಆಡಳಿತ ಕ್ಷೇತ್ರವನ್ನು; ಆಸಕ್ತಿ ಬೆಳೆದದ್ದು ಕನ್ನಡ ಸಾಹಿತ್ಯ ಮತ್ತು ಜಾನಪದದಲ್ಲಿ. ಸಾಹಿತ್ಯ ಮತ್ತು ಜಾನಪದ ಏಳಿಗೆಗೆ ಬದುಕನ್ನು ಮುಡಿಪಾಗಿರಿಸಿದ ಅಪರೂಪ ಚೇತನ. ಎಚ್.ಎಲ್. ನಾಗೇಗೌಡರ ಜೀವನಾನುಭವದ ವ್ಯಾಪ್ತಿ, ಎಷ್ಟು ವಿಶಾಲ, ಅಪರಿಮಿತವಾದುದು ಎಂಬುದಕ್ಕೆ ಅವರು ರಚಿಸಿರುವ ಸುಮಾರು 50 ಕೃತಿಗಳು ಉತ್ತಮ ಸಾಕ್ಷ್ಯಗಳನ್ನು ಒದಗಿಸುತ್ತವೆ. ತಮ್ಮ ತಾರುಣ್ಯದಲ್ಲಿ ರಚಿಸಿದ 'ನಾನಾಗುವೆ ಗೀಜಗನ ಹಕ್ಕಿ' ಮತ್ತು'
ಕಥೆ-ವ್ಯಥೆ’ ಎಂಬ ಮೊತ್ತ ಮೊದಲ ಕವನ ಸಂಕಲನದಿಂದ ಮೊದಲುಗೊಂಡು ತೀರಾ ಇತ್ತೀಚಿನ ಕೃತಿಯಾದ `ಮಲೆನಾಡಿನ ವಾಲ್ಮೀಕಿ’ ಯವರೆಗೂ ಗ್ರಾಮೀಣ ಮುಗ್ಧತೆ, ಕುತೂಹಲ, ಸರಳತೆ, ಅದಮ್ಯ ಜೀವನ ಪ್ರೀತಿಗಳೇ ನಾಗೇಗೌಡರ ಬರವಣಿಗೆಯ ಜೀವದ್ರವ್ಯ. ನವಿರಾದ ಹಾಸ್ಯ, ಸರಸಗಳಿಂದ ಕೂಡಿದ ಅವರ `ನನ್ನೂರು’ ಚಿತ್ರಗಳು ಓದುಗರ ಮನಸ್ಸಿಗೆ ಕಚಗುಳಿಯಿಡುತ್ತವೆ.ಲವಲವಿಕೆಯನ್ನುಂಟುಮಾಡುತ್ತವೆ. ‘ದೊಡ್ಡಮನೆ ' ಮತ್ತು '
ಸೊನ್ನೆಯಿಂದ ಸೊನ್ನೆಗೆ’ ಕಾದಂಬರಿಗಳು ಬಯಲುಸೀಮೆಯ ಗ್ರಾಮೀಣ ಸಂಸ್ಕøತಿಯನ್ನು ಚಿತ್ರಿಸುವ ಗೌಡರ ಅನಘ್ರ್ಯ ಕೃತಿಗಳು. ‘ಭೂಮಿಗೆ ಬಂದ ಗಂಧರ್ವ' ಹೆಸರಾಂತ ಸಂಗೀತಗಾರರಾದ ಭೈರವಿ ಕೆಂಪೇಗೌಡರ ಬಾಳನ್ನು ಚಿತ್ರಿಸುವ ಅಪೂರ್ವ ಕಾದಂಬರಿ. "
ಸರೋಜಿನೀದೇವಿ’ ಕೃತಿಯು ವ್ಯಕ್ತಿತ್ವದ ಅನುತ್ಪ್ರೇಕ್ಷಿತವೂ, ವಾಸ್ತವಿಕವೂ, ರೋಚಕವೂ ಆದ ರಮ್ಯ ನಿರೂಪಣೆಯನ್ನು ಒಳಗೊಂಡ ಜೀವನಚಿತ್ರ. ಗೌಡರು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ ರಚಿಸಿದ ‘ಬೆಟ್ಟದಿಂದ ಬಟ್ಟಲಿಗೆ' ಅಥವಾ '
ಕಾಫಿಯ ಕಥೆ’ ಬಹು ಸ್ವಾರಸ್ಯಕರ.
ನಾಗೇಗೌಡರ ಸೃಜನಶೀಲ ಬರವಣಿಗೆಯಂತೆಯೇ ಅನುವಾದ ಸಾಹಿತ್ಯವು ಕೂಡಾ ಕೇವಲ ರೂಪಾಂತರವಾಗಿಯಷ್ಟೇ ಉಳಿಯದೆ ಪುನರ್ ಅವತರಣ ಕ್ರಿಯೆಯನ್ನು ಸಾಧಿಸಿದೆ. ಸರ್ ವಾಲ್ಟರ್ಸ್ಕಾಟನ ಕೃತಿರತ್ನ ‘ಕೆನಿಲ್ವರ್ತ್' ದಿಂದ ಮೊದಲುಗೊಂಡು
ಪ್ರವಾಸಿ ಕಂಡ ಇಂಡಿಯಾ’ ದ ಎಂಟು ಮಹಾ ಸಂಪುಟಗಳಿಗೂ ಈ ಮಾತು ಅನ್ವಯಿಸುತ್ತದೆ. ‘ಪ್ರವಾಸಿ ಕಂಡ ಇಂಡಿಯಾ’ದ ಪುಟಗಳನ್ನು ತಿರುಹುವಾಗ ಗತಕಾಲದ ಭಾರತೀಯ ಸಂಸ್ಕೃತಿಯ ವೈಭವದ ಚಿತ್ರಪಟವನ್ನು ನಮ್ಮ ಕಣ್ಮುಂದೆ ಸುರುಳಿ ಬಿಚ್ಚಿ ಹರಡಿದಂತೆ ಭಾಸವಾಗುತ್ತದೆ. ಗೌಡರ ಈ ಕೃತಿಶ್ರೇಣಿಯನ್ನು ಬಹುವಾಗಿ ಮೆಚ್ಚಿಕೊಂಡ ರಾಷ್ಟ್ರಕವಿ ಕುವೆಂಪುರವರು “ನಾಗೇಗೌಡರು ಕನ್ನಡ ಸಾಹಿತ್ಯ ವಾಹಿನಿಗೆ ಒಂದು ಹೊಸ ಹೊಳೆ ಸಂಗಮಿಸುವಂತೆ ಮಾಡಿ ಕನ್ನಡಿಗರ ಹೃದಯಶ್ರೀ ನೆರೆಯುಕ್ಕುವಂತೆ ಮಾಡಿದ್ದಾರೆ, ಈ ಬೃಹತ್ ಪ್ರವಾಸ ಕಥನ ಕೃತಿಯ ಮೂಲಕ” ಎಂದು ಆಡಿರುವ ಮಾತುಗಳು ಎಚ್.ಎಲ್. ನಾಗೇಗೌಡರ ಅನುವಾದಕ್ಕೆ ಭಾಷ್ಯ ಬರೆದಂತಿವೆ.
`ನಾಗಸಿರಿ’ ಶೀರ್ಷಿಕೆಯ ಅಡಿಯಲ್ಲಿ ಹೊರಬಂದಿರುವ ಗೌಡರ ಜೀವನ ಚರಿತ್ರೆಯು ಜೀವನ ಯಾತ್ರೆ, ವಿದೇಶ ಯಾತ್ರೆ, ಚುನಾವಣಾ ಯಾತ್ರೆ, ಜಾನಪದ ಯಾತ್ರೆ – ಎಂಬ ನಾಲ್ಕು ಭಾಗಗಳನ್ನು ಒಳಗೊಂಡಿದ್ದು 2,500 ಪುಟಗಳ ಅವರ ಆತ್ಮಕಥೆಯು ಪ್ರಾಮಾಣಿಕ ನಿರೂಪಣೆ, ಆತ್ಮ ನಿರೀಕ್ಷಣೆ, ವಿಚಾರಶಕ್ತಿಗಳಿಂದ ಕೂಡಿದ್ದು ಇತರರಿಗೆ ಆದರ್ಶಪ್ರಾಯವಾದುದಾಗಿದೆ. “ಯಾವ ಭಾಷೆಯಲ್ಲೂ ಇಲ್ಲದ ಬೃಹತ್ ಆತ್ಮಕಥೆ” ಎಂದು ಮನಸಾರೆ ಕೊಂಡಾಡಿದ್ದಾರೆ ಡಾ| ಜಿ.ಎಸ್. ಶಿವರುದ್ರಪ್ಪನವರು,
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರ ಸಂಘ ಸಂಸ್ಥೆಗಳ ಮೂಲಕ ಜಾನಪದೀಯ ಚಟುವಟಿಕೆಗಳಿಗೆ ಪ್ರೇರಕರಾದ ನಾಗೇಗೌಡರು ಅತ್ಯುತ್ತಮ ಜಾನಪದ ಸಂಗ್ರಾಹಕರು, ಸಂಶೋಧಕರಾಗಿ ಹೆಸರಾಗಿದ್ದಾರೆ. ‘ಸೋಬಾನೆ ಚಿಕ್ಕಮ್ಮನ ಪದಗಳು’,'
ಪದಪದವೆ ನಮ್ಮ ಎದೆಯಲ್ಲಿ’, ‘ಹೆಳವರು ಮತ್ತು ಅವರ ಕಾವ್ಯಗಳು’,'
ದುಂಡುಮಲ್ಲಿಗೆ ಹೂ ಬುಟ್ಟೀಲಿ ಬಂದಾವ’ – ಇವು ಒಂದೊಂದು ಜಾನಪದ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಗಳಾಗಿವೆ. ಕರ್ನಾಟಕ ಜಾನಪದ ಪರಂಪರೆಯನ್ನು ಕನ್ನಡೇತರರಿಗೆ ಮತ್ತು ಪಾಶ್ಚಾತ್ಯರಿಗೆ ತಿಳಿಯಪಡಿಸುವ ಉದ್ದೇಶದಿಂದ ನಾಗೇಗೌಡರು ಪ್ರೊ. ಎಚ್.ಎ. ರಾಮಕೃಷ್ಣ ಅವರೊಂದಿಗೆ ಸಂಯುಕ್ತವಾಗಿ ಪ್ರಕಟಿಸಿರುವ `ಎಸೆನ್ಷಿಯಲ್ಸ್ ಆಫ್ ಕರ್ನಾಟಕ ಫೋಕ್ಲೋರ್’ ಏಕೈಕ ಇಂಗ್ಲಿಷ್ ಕೃತಿಯು ಕರ್ನಾಟಕದ ಸಮಗ್ರ ಜಾನಪದ ಪರಂಪರೆಯನ್ನು ಸ್ಥೂಲವಾಗಿ ಪ್ರತಿಬಿಂಬಿಸುತ್ತದೆ.
ನಾಗೇಗೌಡರ ಪ್ರಧಾನ ಸಂಪಾದಕತ್ವದಲ್ಲಿ ಹೊರತಂದಿರುವ ಸಹಸ್ರ ಪುಟಗಳ 'ಕನ್ನಡ ಜಾನಪದ ಕೋಶ' ಕೃತಿಯು ಪ್ರತ್ಯೇಕವಾಗಿ ಜಾನಪದಕ್ಕೆ ಮೀಸಲಾದ ಶಬ್ದಾರ್ಥ ನಿಘಂಟು. ನಾಗೇಗೌಡರು ತಮ್ಮ ಎಂಬತ್ತೆಂಟರ ಇಳಿವಯಸ್ಸಿನಲ್ಲಿ ರಚಿಸಿರುವ
ಕುವೆಂಪು ಕಂಡ ಕಾಡು’ ನಾ ಕಂಡ ಕುವೆಂಪು' ಎಂಬ ಎರಡು ಸುದೀರ್ಘ ಲೇಖನಗಳನ್ನು ಒಳಗೊಂಡಿರುವ '
ಮಲೆನಾಡ ವಾಲ್ಮೀಕಿ’ ಎಂಬ ಕೃತಿಯು ನಾಗೇಗೌಡರು ಮತ್ತು ರಾಷ್ಟ್ರಕವಿ ಕುವೆಂಪು ಅವರ ನಡುವಿದ್ದ ಭಾವನಾತ್ಮಕ ಸಂಬಂಧವನ್ನು ತಿಳಿಸಿಕೊಡುವುದರೊಂದಿಗೆ ಕುವೆಂಪು ವಿಚಾರಧಾರೆಯ ಹೊಸ ಹೊಳಹುಗಳನ್ನು ಪರಿಚಯಿಸುತ್ತದೆ.
ಕಳೆದ 24 ವರ್ಷಗಳಿಂದ ನಾಗೇಗೌಡರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಾ ಬಂದಿರುವ ಕನ್ನಡದ ಏಕೈಕ ತ್ರೈಮಾಸಿಕ `ಜಾನಪದ ಜಗತ್ತು’ ಪತ್ರಿಕೆ ಕರ್ನಾಟಕದ ಜಾನಪದಕ್ಕೆ ಸಂಬಂಧಪಟ್ಟಂತೆ ಹೊಸ ಹೊಸ ವಿಚಾರಗಳನ್ನು ಪ್ರಕಟಿಸುತ್ತಾ ಬಂದಿದೆ; ಕರ್ನಾಟಕ ಜಾನಪದದ ಕ್ಷಿತಿಜವನ್ನು ವಿಸ್ತರಿಸುತ್ತಿದೆ.
ಜಾನಪದ ಸಂರಕ್ಷಣೆ, ಸಂವರ್ಧನೆ, ಪ್ರಚಾರ ಹಾಗೂ ಪ್ರಸಾರಗಳನ್ನು ಪ್ರಧಾನ ಆಶಯಗಳನ್ನಾಗಿರಿಸಿಕೊಂಡು 1979ರಲ್ಲಿ ಗೌಡರು ಸ್ಥಾಪಿಸಿದ ಕರ್ನಾಟಕ ಜಾನಪದ ಪರಿಷತ್ತು ನಾಡಿನಾದ್ಯಂತ ಜಾನಪದ ಚಟುವಟಿಕೆಗಳಿಗೆ ನಾಂದಿ ಹಾಡಿತು. ಸುಮಾರು ಸಾವಿರಾರು ಗಂಟೆಗಳ ಕಾಲ ಕೇಳಬಹುದಾದಷ್ಟು ಜನಪದ ಗೀತೆಗಳ ಧ್ವನಿಮುದ್ರಣ, 800 ಗಂಟೆಗಳ ಕಾಲ ನೋಡಬಹುದಾದಷ್ಟು ವಿಡಿಯೋ ಚಿತ್ರೀಕರಣ, ಒಂದು ಸಾವಿರಕ್ಕೂ ಹೆಚ್ಚು ವರ್ಣಪಾರದರ್ಶಿಕೆಗಳು ನಾಗೇಗೌಡರ ಜಾನಪದ ಭಂಡಾರದಲ್ಲಿವೆ. ಜನಪದ ಕಲೆ, ಸಂಸ್ಕೃತಿ, ಆಚರಣೆಗಳನ್ನು ಕುರಿತಾದಂತೆ ನಾಗೇಗೌಡರ ಮಾರ್ಗದರ್ಶನದಲ್ಲಿ ಮೂಡಿಬಂದ `ಸಿರಿಗಂಧ’ ಎಂಬ ಜಾನಪದ ಸಾಕ್ಷ್ಯಚಿತ್ರವು 108 ಕಂತುಗಳಲ್ಲಿ ಬೆಂಗಳೂರು ದೂರದರ್ಶನದಿಂದ ಪ್ರಸಾರವಾಗಿದ್ದು ಆಬಾಲವೃದ್ಧರಾದಿಯಾಗಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದೆ. ಇಷ್ಟಲ್ಲದೆ ಆರು ವರ್ಷ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಮುಂದಿನ 25 ವರ್ಷಗಳಿಗೆ ಸಾಕಾಗುವಷ್ಟು ರಚನಾತ್ಮಕ ಕಾರ್ಯಯೋಜನೆಗಳನ್ನು ರೂಪಿಸಿ ಅವುಗಳಲ್ಲಿ ಅನೇಕವನ್ನು ಅನುಷ್ಠಾನಕ್ಕೆ ತಂದವರು ಗೌಡರು.
ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ರಾಮನಗರದ ಬಳಿ ಸುಮಾರು 15 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಜಾನಪದ ಲೋಕವು ನಾಗೇಗೌಡರು ಕಂಡ ಹಲವು ವರ್ಷಗಳ ಕನಸಿನ ಕೂಸು. ಇಂದು ಅದು ದೇಶದ ಅತ್ಯಂತ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿ ಬೆಳವಣಿಗೆ ಸಾಧಿಸಿದೆ.
ನಾಗೇಗೌಡರು ಆಡಳಿತ, ಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗಾಗಿ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1974), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1988), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (1990), ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್ (1992), ಅಖಿಲ ಭಾರತ 64ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ (1995), 1995ರಲ್ಲಿ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯತ್ವ ಮತ್ತು ಅದೇ ವರ್ಷದ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ಜರುಗಿದ, ದಕ್ಷಿಣ ಭಾರತ ರಾಜ್ಯಗಳ ಶಾಸಕರ ಸಮ್ಮೇಳನದಲ್ಲಿ, ಇಡೀ ದಕ್ಷಿಣ ರಾಜ್ಯಗಳಲ್ಲೇ ಅತ್ಯಂತ ಹಿರಿಯ ಶಾಸಕರೆಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡರ ಉಪಸ್ಥಿತಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರಿಂದ ಸನ್ಮಾನ, ‘ಪ್ರೇರಣಾ ಪ್ರಶಸ್ತಿ ‘(1999), ಎಸ್.ಡಿ. ಜಯರಾಂ ಪ್ರಶಸ್ತಿ, ಮಂಗಳೂರಿನ ಸಂದೇಶ ‘ಕನ್ನಡ ಸಾಹಿತ್ಯ ಪ್ರಶಸ್ತಿ’ (2002) – ಭಾರತದ ಸಾರ್ವಜನಿಕ ಸಂಪರ್ಕ ಸಂಸ್ಥೆಯ ‘ವಿ ಆರ್ ಎಸ್ ಟಿ ಎಕ್ಸಲೆನ್ಸಿ ಪ್ರಶಸ್ತಿ' (2002), ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ '
ಚುಂಚಶ್ರೀ’ ಪ್ರಶಸ್ತಿ’ (2002) ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ `ನಾಡೋಜ’ ಪ್ರಶಸ್ತಿ (2002) ‘ಕರ್ನಾಟಕ ಸರ್ಕಾರದಿಂದ ‘ಪಂಪ ಪ್ರಶಸ್ತಿ’ (2005) – ಇವು ಗೌಡರಿಗೆ ಸಂದ ಪ್ರಶಸ್ತಿಗಳು ಹಾಗೂ ಗೌರವಗಳು.
ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕವನ್ನು ಸ್ಥಾಪಿಸುವುದರ ಮೂಲಕ ಜಾನಪದಕ್ಕೆ ಸಾಂಸ್ಥಿಕವಾಗಿ ಗಟ್ಟಿಯಾದ ನೆಲೆಯನ್ನು ಒದಗಿಸಿಕೊಟ್ಟ ಶ್ರೀ ಎಚ್ ಎಲ್ ನಾಗೇಗೌಡರು ದಿನಾಂಕ 22.09.2005 ರಂದು ನಿಧನ ಹೊಂದಿದರು.