ನಾಡೋಜ ಎಚ್. ಎಲ್. ನಾಗೇಗೌಡ ಜಾನಪದ ಸಂಶೋಧನಾ ಕೇಂದ್ರ
ದಿವಂಗತ ನಾಡೋಜ ಎಚ್. ಎಲ್. ನಾಗೇಗೌಡರು ಕರ್ನಾಟಕ ಕಂಡ ಅಪೂರ್ವ ವ್ಯಕ್ತಿತ್ವ. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಬಹಳ ದೊಡ್ಡದು. ಕಾವ್ಯ, ಕಾದಂಬರಿ, ಪ್ರಬಂಧ -ಹೀಗೆ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಕನ್ನಡ ಓದುಗರು ಅವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಿದ್ದಾರೆ. ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಕರ್ನಾಟಕದ ಹೆಸರಾಂತ ಕನ್ನಡ ಸಾಹಿತ್ಯ ಪರಿಷತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯಿಂದ ಗೌರವಿಸಿದೆ. ನಾಡಿನ ಪ್ರತಿಷ್ಟಿತ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.
ನಾಡೋಜ ಎಚ್. ಎಲ್. ನಾಗೇಗೌಡರ ಮತ್ತೊಂದು ಮಹತ್ ಸಾಧನೆಯ ಮೂಲ ಜಾನಪದವನ್ನು ಕ್ಷೇತ್ರದಲ್ಲಿ ಗುರುತಿಸಿ, ಸಂಗ್ರಹಿಸಿ ಪ್ರಕಟಿಸಿರುವುದರ ಜೊತೆಗೆ ಜಾನಪದ ಅಧ್ಯಯನಕ್ಕೆಂದೆ ಕರ್ನಾಟಕ ಜಾನಪದ ಪರಿಷತ್ತು ಎಂಬ ಕೇಂದ್ರವನ್ನು ಆರಂಭಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದಷ್ಟೇ ಮಹತ್ವದ ಕೆಲಸವನ್ನು ನಾಡೋಜ ಎಚ್. ಎಲ್. ನಾಗೇಗೌಡರು ಜಾನಪದ ಕ್ಷೇತ್ರದಲ್ಲೂ ಮಾಡಿದ್ದಾರೆ. ಹೀಗೆ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಸಮ ಜೋಡಿಯಾಗಿ, ಸಮರ್ಥವಾಗಿ ಸಾಹಿತ್ಯ ಮತ್ತು ಜಾನಪದದಲ್ಲಿ ಸಾಧನೆ ಮಾಡಿದ ಮತ್ತೊಬ್ಬ ಸಾಧಕನನ್ನು ನೀವು ಕರ್ನಾಟಕದಲ್ಲಿ ನೋಡಲಾರಿರಿ. ಆ ದೃಷ್ಟಿಯಿಂದ ಕರ್ನಾಟಕಕ್ಕೆ ನಾಡೋಜ ಎಚ್. ಎಲ್. ನಾಗೇಗೌಡರು ಅಂದರೆ ಅವರೊಬ್ಬರೇ. ಇದು ಪ್ರಶಂಸೆ ಮಾತಲ್ಲ. ಕಡು ವಾಸ್ತವ.
ಅಂಥವರೊಬ್ಬರ ಸಾಧನೆಯನ್ನು ಮುಂದೆಯೂ ಸಾಕಾರಗೊಳಿಸುವ ಕಾರಣಕ್ಕಾಗಿ ಹಿಂದಿನ ಶ್ರೀ ಟಿ. ತಿಮ್ಮೇಗೌಡ ನಿವೃತ್ತ ಐ.ಎ.ಎಸ್ ಅಧಿಕಾರಿಗಳು ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರ ನೇತೃತ್ವದಲ್ಲಿ ಎಚ್. ಎಲ್. ನಾಗೇಗೌಡ ಜಾನಪದ ಸಂಶೋಧನಾ ಕೇಂದ್ರವನ್ನು ರಾಮನಗರದ ಬಳಿ ಇರುವ ಜಾನಪದ ಲೋಕದಲ್ಲಿ ಆರಂಭಿಸಲಾಗಿದೆ.
ಈ ಕೇಂದ್ರವು ಪ್ರಮುಖವಾಗಿ ಎಚ್. ಎಲ್. ನಾಗೇಗೌಡರು ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಸಂಶೋಧನೆಗೆ ಒಳಪಡಿಸುತ್ತದೆ. ಮೊದಲ ಹಂತದಲ್ಲಿ ಇಲ್ಲಿಯವರೆಗೆ ನಾಗೇಗೌಡರ ಬಗ್ಗೆ ನಡೆದಿರುವ ಅಧ್ಯಯನದ ಸಂಶೋಧನಾ ಪ್ರಬಂಧ ಮತ್ತು ಪುಸ್ತಕಗಳನ್ನು ಪರಿಶೀಲಿಸಿ, ಉತ್ತಮವಾದುದನ್ನು ಸಂಗ್ರಹ ರೂಪದಲ್ಲಿ ಪ್ರಕಟಿಸಲು ಪ್ರಯತ್ನಿಸುತ್ತದೆ.
ಎರಡನೆಯ ಹಂತದಲ್ಲಿ ನಾಗೇಗೌಡರ ಬಗ್ಗೆ ಬರೆದಿರುವ ಪ್ರಬಂಧ/ ಲೇಖನಗಳನ್ನು ಪರಿಶೀಲಿಸಿ ಉತ್ತಮವಾದ ಪ್ರಬಂಧ/ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಅಯೋಜಿಸಿದೆ.
ಮೂರನೇಯ ಹಂತವಾಗಿ ಜಾನಪದ ಕ್ಷೇತ್ರದಲ್ಲಿನ ಅಮೂಲ್ಯ ಹಾಗೂ ಅಪರೂಪದ ಪ್ರಕಾರಗಳನ್ನು ಕುರಿತು ಸಂಶೋಧನೆ ಮಾಡಲು ಪ್ರೋತ್ಸಾಹಿಸುತ್ತದೆ.