ಲೋಕಸಿರಿ ತಿಂಗಳ ಅತಿಥಿ ಕಾರ್ಯಕ್ರಮ
ಪ್ರತಿ ತಿಂಗಳ 2ನೇ ಶನಿವಾರ

ಲೋಕಸಿರಿ ಕರ್ನಾಟಕ ಜಾನಪದ ಪರಿಷತ್ತಿನ ಸಾರ್ಥಕ ಕಾರ್ಯಕ್ರಮಗಳಲ್ಲಿ ಒಂದು. ಜಾನಪದ ಲೋಕದಲ್ಲಿ ‘ಲೋಕಸಿರಿ’ ಪ್ರತಿ ತಿಂಗಳ ಎರಡನೇ ಶನಿವಾರದಂದು ನಡೆಸಿಕೊಂಡು ಬರುತ್ತಿರುವ ಮಹತ್ವದ ಕಾರ್ಯಕ್ರಮ. ಜಾನಪದ ಲೋಕದಲ್ಲಿ ನಡೆದ ಮೊಟ್ಟ ಮೊದಲ ಲೋಕಸಿರಿ ತಿಂಗಳ ಅತಿಥಿ ಕಾರ್ಯಕ್ರಮ 13.09.2014 ರಿಂದ ನಡೆಯುತ್ತಿದೆ. ಮೊದಲ ಕಾರ್ಯಕ್ರಮದಲ್ಲಿ ಹಾಲಕ್ಕಿ ಕಲಾವಿದೆ ಶ್ರೀಮತಿ ಸುಕ್ರೀ ಬೊಮ್ಮಗೌಡ ಅವರಿಗೆ ಲೋಕಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಂದಿನಿಂದ ಲೋಕಸಿರಿ ತಿಂಗಳ ಅತಿಥಿ ಕಾರ್ಯಕ್ರಮ ಸುದೀರ್ಘವಾಗಿ ಮತ್ತು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಜಾನಪದ ಕಲೆಯಲ್ಲಿ ಮಹತ್ತರ ಸಾಧನೆ ಮಾಡಿದ ಜನಪದ ಕಲಾವಿದರನ್ನು ಜಾನಪದ ಲೋಕಕ್ಕೆ ಆಹ್ವಾನಿಸಿ ತುಂಬು ಗೌರವದಿಂದ ‘ಲೋಕಸಿರಿ’ ಹೆಸರಿನಲ್ಲಿ ಗೌರವಿಸಲಾತ್ತಿದೆ. ಕಲೆಯೊಂದಿಗೆ ಬದುಕು ಕಳೆದ ಅಸಂಖ್ಯ ಕಲಾವಿದರಲ್ಲಿ ಆಯ್ದ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ಇದಾಗಿದೆ. ಕಲೆಯ ಬಗೆಗೆ, ಕಲಿತ ರೀತಿ, ತಮ್ಮ ಹಿಂದಿನ ಕಾಲಮಾನ, ಅದರಲ್ಲಿ ಕಂಡ ಆದಾಯ, ಗೌರವ ಸಮ್ಮಾನಗಳ ಬಗ್ಗೆ, ತುಂಬು ಕುಟುಂಬ ಮನೆ ಮಾರು, ಬದುಕಿನ ಕಷ್ಟ-ಸುಖಗಳ ಬಗೆಗೆ ಮನಬಿಚ್ಚಿ ಮಾತಾಡುವ ವೇದಿಕೆ ಇದಾಗಿದೆ. ಜನಪದ ಕಲಾವಿದರ ಕಲಾಪ್ರದರ್ಶನ ನೋಡುವುದಕ್ಕೂ, ಅವರೊಂದಿಗೆ ಕೂತು ಚರ್ಚಿಸುವುದಕ್ಕೂ ಅಂತರವಿದೆ. ಕಲಾ ಪ್ರದರ್ಶನ ತಾವು ಕಲಿತ ಕಲೆಯ ಒಂದಿಗೆ ಬೆರೆತು ಪ್ರದರ್ಶಿಸುವಿಕೆಯದು. ಅವರೊಂದಿಗಿನ ಮಾತು ಅವರ ಅನುಭವಪೂರಿತವಾದುದು.

ತಿಂಗಳಿಂದ ತಿಂಗಳಿಗೆ ಭಿನ್ನ ಕಲಾವಿದರು ವಿಭಿನ್ನ ಪ್ರದೇಶ, ಭಿನ್ನ ಬದುಕು ಕುರಿತ ಅನಾವರಣವೇ ಆಗುತ್ತದೆ. ಒಂದೆರಡು ಗಂಟೆಯ ಈ ಕಾರ್ಯಕ್ರಮ ಆರಂಭಗೊಂಡರೆ ನಾವೊಂದು ನಾಟಕ ಕಂಡ ಹಾಗೆ ಮನಸ್ಸು ತಟ್ಟುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಪ್ರತಿಕ್ರಿಯೆ ಮೂಲಕ ಅದೊಂದು ಬಗೆಯ ಚರ್ಚೆ ನಡೆಯುತ್ತದೆ. ಪರಿಹಾರ ಮಾರ್ಗಸೂಚಿ ಇರುತ್ತದೆ. ಕರ್ನಾಟಕ ಜಾನಪದ ಪರಿಷತ್ತು ವರ್ಷ ವರ್ಷವೂ ಲೋಕೋತ್ಸವದ ಮೂಲಕ ನಾಡಿನ ಮೂಲೆ ಮೂಲೆಯಿಂದ ಕಲಾವಿದರ ಕರೆದು ಗೌರವಿಸುತ್ತಿದೆ ಆದರೆ ಕಲಾವಿದರ ಸ್ಥೂಲ ಪರಿಚಯವನ್ನು ಮಾಡಲಾಗುತ್ತಿರಲಿ. ಅಲ್ಲಿ ಕಲಾವಿದರ ಪ್ರತಿಭಾ ಸಂಪನ್ನತೆಯನ್ನು ನೋಡಲು, ಅರಿಯಲು, ಸಾಧ್ಯವಾಗುತ್ತಿರಲ್ಲಿಲ್ಲ. ಲೋಕಸಿರಿಗೆ ಆಹ್ವಾನಿಸಿದ ಕಲಾವಿದರು ಬಹುತೇಕರು ತಮ್ಮನ್ನು ತಾವು ಆಯಾಯ ಕಲೆಯೊಂದಿಗೆ ಬೆರೆತು ಹೋದವರು. ಆಯಾಯ ಕಲೆಯ ಆಳ, ಅಗಲ ಹಿಡಿದು ವಿಸ್ತರಿಸಿದವರು, ಪ್ರೌಢತೆ ತಂದವರು ಇಲ್ಲಿ ಕಲಾವಿದರ ಒಳಮುಖದ ರೂಪ ಸಿಗುತ್ತದೆ. ಅವರ ಪ್ರತಿಭೆ, ಪ್ರಾವಿಣ್ಯತೆಯ ಸ್ವರೂಪ, ಬದುಕು ಅನಾವರಣಗೊಳ್ಳುತ್ತದೆ.

ಸಂಕ್ರಾಂತಿ ಸಂಭ್ರಮ

ಸುಗ್ಗಿಯ ಮೊದಲ ಹಬ್ಬ ಸಂಕ್ರಾಂತಿ. ಸುಗ್ಗಿ ಕಾಲದ ಸಂಭ್ರಮದ ಹಬ್ಬ ‘ಸಂಕ್ರಾಂತಿ’ ಮೈಸೂರು ಸೀಮೆಯ ಹಳ್ಳಿಗಳಲ್ಲಿ ನಡೆವ ವಿಶಿಷ್ಟ ಹಬ್ಬ. ದನಗಳನ್ನು ಕಿಚ್ಚಲ್ಲಿ ಹಾಯಿಸಿ ನಡೆಯುವ ವಿಶಿಷ್ಟ ಹಬ್ಬ. ಊರ ಮುಂಭಾಗದಲ್ಲಿ ಗೋಪುರಾಕಾರಕ್ಕೆ ನಿರ್ಮಿಸಿದ ಎರಡು ಚಿಕ್ಕ ಗುಡಿಗಳಲ್ಲಿ (ಸಂಕ್ರಾಂತಮ್ಮನ ಗುಡಿ) ದೀಪವಿರಿಸಿ ಪೂಜಿಸಿ ಹೊಸ ಅಕ್ಕಿ ಬಳಸಿ ‘ಕಿಚ್ಚಡಿ ಅನ್ನ’ ಮಾಡಿ ಎಡೆ ಹಿಟ್ಟು ಪೂಜಿಸಲಾಗುತ್ತದೆ. ರಾಸುಗಳಿಗೆ ಬಣ್ಣಬಣ್ಣದ ಚಂದದ ಗೌಸು ಹೊದಿಸಿ, ಕೊಂಬಿಗೆ ಕೊಂಬುಕಳಸ ತೊಡಿಸಿ, ಗುಲಂಪಟ್ಟೆ, ಬತಾಸುಪಟ್ಟಿ, ನೀಲಿ ಬಣ್ಣಗಳಿಂದ ಸಿಂಗರಿಸಿದ ಎತ್ತು ದನಕರುಗಳನ್ನು ಬೆಂಕಿಯ ಜ್ವಾಲೆಯಲ್ಲಿ ದಾಟಿಸುವ ಸೊಗಸಿನ ಆಚರಣೆಯೇ ಸಂಕ್ರಾಂತಿ ಸಂಭ್ರಮ. ಪಟ ಪಟನೆ ಬೆದರಿದ ದನಗಳು ಕಿಚ್ಚು ಹಾಯ್ದು ಸಾಗುವ ದೃಶ್ಯ ಅಪೂರ್ವವಾದುದು. ಗ್ರಾಮೀಣ ಪ್ರದೇಶದಲ್ಲಿ ಧಾನ್ಯಗಳನ್ನು ಒಕ್ಕಣೆ ಮಾಡಲು ಕಣವನ್ನು ನಿರ್ಮಿಸಲಾಗುತ್ತದೆ. ಕಣದ ಮಧ್ಯ ಭಾಗದಲ್ಲಿ ಮೇಟಿಯನ್ನು ನೆಟ್ಟಿರುತ್ತಾರೆ. ಮೇಟಿಗೆ ಇಡೀ ಕಣದ ಅಧಿಪತಿ ಸ್ಥಾನವನ್ನು ನೀಡಲಾಗಿದೆ. ಆದರೆ ಇಂದಿನ ಯಾಂತ್ರೀಕೃತ ಬದುಕಲ್ಲಿ ಕಣ, ಮೇಟಿ, ಸಗಣಿ ಬೆನಕ, ಎತ್ತುಗಳ ಕಲ್ಪನೆ ಎಲ್ಲವೂ ಮಾಯಾವಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಜನರ ಕಲೆ, ಸಂಸ್ಕøತಿಗಳನ್ನು ಉಳಿಸಲು ಜಾನಪದ ಲೋಕದಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಕ್ರಾಂತಿ ಸಂಭ್ರಮದ ಹೆಸರಿನಲ್ಲಿ ಪ್ರತಿ ವರ್ಷ ನಡೆಸಲಾಗುತ್ತಿದೆ.

ಜಾನಪದ ಲೋಕದ ಸುತ್ತಮುತ್ತರ ಹಳ್ಳಿಗಳಿಂದ ಸಂಕ್ರಾಂತಿ ಹಬ್ಬಕ್ಕೆ ಜೋಡಿ ಎತ್ತುಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ರೈತರ ಜೀವನಾಡಿ ಸಂಭ್ರಮದ ಸಡಗರದ ಹಬ್ಬ ಸಂಕ್ರಾಂತಿಯಲ್ಲಿ ರಾಶಿ ಪೂಜೆ ರಾಸುಗಳ ಪೂಜೆ ಉತ್ತಮ ರಾಸುಗಳಿಗೆ ನಗದು ಬಹುಮಾನವನ್ನು ನೀಡಿ ಕಿಚ್ಚು ಹಾಯಿಸುವುದರ ಮುಖಾಂತರ ಕರ್ನಾಟಕ ಜಾನಪದ ಪರಿಷತ್ತು ಸಂಕಾಂ್ರತಿ ಸಂಭ್ರಮವನ್ನು ಆಚರಿಸುತ್ತಾ ಬಂದಿದೆ.

ರಾಜ್ಯ ಮಟ್ಟದ ಜನಪದ ಗೀತಗಾಯನ ಸ್ವರ್ಧೆ – ಜನವರಿ ತಿಂಗಳು

ಜಾನಪದ ಹಿರಿಯರ ಮೂಲಕ ಬಾಯಿಂದ ಬಾಯಿಗೆ ಬಂದ ಒಂದು ನೈಜ ಕಲೆ. ಕಲೆಯ ಉಳಿವಿಗಾಗಿ ನಾಡೋಜ ಎಚ್.ಎಲ್.ನಾಗೇಗೌಡರ ಶ್ರಮ ಶ್ಲಾಘನೀಯವಾಗಿದ್ದು, ಅವರ ಹೆಸರು ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಯಬೇಕಾದರೆ ಅವರು ಕಲೆಗೆ ನೀಡಿದ ಮನ್ನಣೆ ಗೌರವವನ್ನು ಉಳಿಸಿ ಬೆಳೆಸಿ ಹೊಸ ತಲೆÀಮಾರಿಗೂ ಕೊಂಡೊಯ್ಯುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದ ನಾಗೇಗೌಡರ ಹಿರಿಯ ಪುತ್ರ ದಿವಂಗತ ಎಚ್.ಎನ್ ನಂಜರಾಜ್ ಅವರ ಸ್ವರರ್ಣಾರ್ಥವಾಗಿ ಎಚ್. ಎಲ್. ನಾಗೇಗೌಡರು ಇಟ್ಟಿರುವ ಧತ್ತಿ ನಿಧಿಯಿಂದ ಯುವಜನರಲ್ಲಿ ಜನಪದ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಶಾಲಾ ಕಾಲೇಜುಗಳಲ್ಲಿ ಮತ್ತು ಕಲಿಯುವ ನವ ಪೀಳಿಗೆಯವರಿಗೆ ಮಾರ್ಗದರ್ಶನವಾಗಲು ರಾಜ್ಯಮಟ್ಟದ ಜನಪದ ಗೀತಾಗಾಯನ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸ್ವರ್ಧೆಗಳು ಪ್ರತಿ ಜಿಲ್ಲೆಗಳಿಂದ ಜಿಲ್ಲಾ ಘಟಕಗಳ ಅಧ್ಯಕ್ಷರ ಅವಗಾಹನೆಯ ಮೇರೆಗೆ ಉತ್ತಮ ತಂಡಗಳು ಬರುತ್ತವೆ.
ಜನಪದ ಗೀತೆಗಳನ್ನು ಹಾಡುವ ಸಂದರ್ಭದಲ್ಲಿ ಮೂಲ ಸಾಹಿತ್ಯ, ಮೂಲಧಾಟಿಗೆ ಪ್ರಾಧಾನ್ಯತೆ ನೀಡಿಲಾಗುತ್ತದೆ. ಮೂಲ ದನಿಬನಿಯನ್ನು ಹೊಂದಿರುವ ಗೀತೆಗಳನ್ನು ಹಾಡುವವರಿಗೆ ಮೊದಲ ಪ್ರಾಶಸ್ತ್ಯ. ಪರಂಪರೆಯಿಂದ ಬಂದ ಮೂಲ ಜನಪದ ಗೀತೆಗಳು, ಪ್ರಾಶ್ಚಾತ್ಯ ವಾದ್ಯಗಳನ್ನು ಬಳಸದೇ ಜನಪದ ವಾದ್ಯ ಪರಿಕರಗಳನ್ನು ನೀಡಿದ ಕಾಲಾವಕಾಶದಲ್ಲಿ ಹಾಡಿ ಮುಗಿಸಬೇಕೆಂಬ ನಿಯಮಗಳಿವೆ. ಜಾನಪದ ಪರಿಷತ್ತಿನಲ್ಲಿ ದೊರೆಯಲಿರುವ ಧ್ವನಿಮುದ್ರಿಕೆಗಳನ್ನು ಕೇಳಿ, ಅಭ್ಯಾಸ ಮಾಡಿ ಜನಪದ ಗೀತೆಗಳ ಸಾಹಿತ್ಯ-ಸಂಗೀತ ದನಿ ಬನಿಗಳನ್ನು ಮುಂದಿನ ಪೀಳಿಗೆಗೆ ವರ್ಗಾಹಿಸಲು ಈ ಬಗೆಯ ಸ್ವರ್ಧೆಗಳು ಅನುಕೂಲವಾಗುತ್ತವೆ.

ಲೋಕೋತ್ಸವ

ಕನ್ನಡ ನಾಡಿನ ಪ್ರತಿಯೊಂದು ಹಳ್ಳಿಯಲ್ಲಿಯೂ ಅತ್ಯುತ್ತಮವಾದ ಜನಪದ ಕಲಾವಿದರುÀ ಬಹುಸಂಖ್ಯೆಯಲ್ಲಿದ್ದಾರೆ. ಜನಪದ ಕಲಾವಿದರು ಸಾವನ್ನಪ್ಪಿದರೆ, ಅವರೊಂದಿಗೆ ಅವರಲ್ಲಿರುವ ಸಮೃದ್ಧ ಸಾಹಿತ್ಯ ಮತ್ತು ಉತ್ಕಷ್ಟ ಕಲಾಪರಂಪರೆಯೂ ಸಹ ಮಣ್ಣಾಗಿ ಹೋಗುತ್ತದೆ. ಈ ದಿಸೆಯಲ್ಲಿ 1994ರಲ್ಲಿ ಜಾನಪದ ಲೋಕವು ಸಾರ್ವಜನಿಕರಿಗೆ ಮುಕ್ತಗೊಂಡ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜನಪದ ಕಲಾವಿದರನ್ನು ಕರೆಸಿ ಅವರ ಕಲಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ, ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಜನಪದ ಕಲಾವಿದರುಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಆರ್ಥಿಕ ಅನುಕೂಲತೆಗಳನ್ನು ಕಲ್ಪಿಸಿಕೊಡುತ್ತಿದೆ. ಈ ಸಂದರ್ಭದಲ್ಲಿ ಅತ್ಯುತ್ತಮ ಜನಪದ ಕಲಾವಿದರಿಗೆ ಜಾನಪದ ಲೋಕ ಪ್ರಶಸ್ತಿ ನೀಡಿ ಗೌರವಿಸುವ ಸಂಪ್ರದಾಯವನ್ನು ಮಾಡುತ್ತಾ ಬಂದಿದ್ದು. ಈ ಉತ್ಸವವನ್ನು ಫೆಬ್ರುವರಿ ತಿಂಗಳಿನಲ್ಲಿ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಕಲಾವಿದರುಗಳನ್ನು ಕರೆಸಿ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆಲ್ಲದೆ, ವಿಚಾರ ಸಂಕಿರಣ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಜನಪದ ಗೀತ ಗಾಯನೋತ್ಸವ, ಕಲೆಗಳ ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳು ಇರುತ್ತದೆ.

ಲೋಕೋತ್ಸವದಲ್ಲಿ ಜಾನಪದ ಲೋಕ ಪ್ರಶಸ್ತಿ


ಕರ್ನಾಟಕ ಸರ್ಕಾರ ಮತ್ತು ಹತ್ತು ಹಲವು ಸಂಘ-ಸಂಸ್ಥೆಗಳು ಕನ್ನಡ ನಾಡು ನುಡಿ ಸಂಸ್ಕೃತಿಯ ಏಳಿಗೆಗಾಗಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿವೆ. ಇಲ್ಲಿ ಪ್ರಶಸ್ತಿಗಳು ಬಹುಪಾಲು ಶಿಷ್ಟ ಕಲಾವಿದರಿಗೆ ಹೆಚ್ಚಾಗಿ, ಜನಪದ ಕಲಾವಿದರಿಗಿರುತ್ತಿರಲಿಲ್ಲ. ಇಂತಹ ತಾರತಮ್ಯವನ್ನು ಮನಗಂಡ ನಾಡೋಜ ಎಚ್. ಎಲ್. ನಾಗೇಗೌಡರು ಪೂರ್ಣಪ್ರಮಾಣದಲ್ಲಿ ಕನ್ನಡ ಜಾನಪದ ಜಗತ್ತಿನ ಉತ್ತಮ ಜನಪದ ಕಲಾವಿದರಿಗೆ ಮಾನ ಸನ್ಮಾನಗಳು, ಪ್ರಶಸ್ತಿಗಳು ಲಭಿಸುವಂತಾಗಬೇಕೆಂದು ಆಶಿಸಿ 1980 ರಿಂದಲೂ ನೂರಾರು ಮಂದಿ ಜನಪದ ಕಲಾವಿದರನ್ನು ಗುರುತಿಸಿ ಅವರನ್ನು ಸಾರ್ವಜನಿಕವಾಗಿ ಗೌರವಿಸುತ್ತಾ ಬಂದರು. ನಂತರದಲ್ಲಿ ಜಾನಪದ ಲೋಕವು ಸಾರ್ವಜನಿಕರ ಮುಕ್ತವಾದ ನಂತರ 1996ರಿಂದೀಚೆಗೆ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಹಳ್ಳಿಗಾಡಿನ ಮೂಲೆ ಮುಡುಕುಗಳಲ್ಲಿ ಬೆಳಕಿಗೆ ಬಾರದೆ ಮುಚ್ಚಿ ಹೋಗಿರುವ ಅಸಂಖ್ಯಾತ ಉತ್ಕೃಷ್ಟ ಜನಪದ ಕಲಾವಿದರನ್ನು ಗಂಡಸು ಹೆಂಗಸರೆನ್ನದೆ ಪತ್ತೆಹಚ್ಚಿ, ಅವರನ್ನು ಜಾನಪದ ಲೋಕಕ್ಕೆ ಕರೆಸಿ ಸಾವಿರಾರು ಮಂದಿ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನು ಆಹಾನಿಸಿ ಅವರುಗಳಿಂದ ಈ ಕಲಾವಿದರುಗಳಿಗೆ ಜಾನಪದ ಲೋಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸುವ ಪ್ರಶಸ್ತಿ ಪ್ರದಾನ ವ್ಯವಸ್ಥೆಯೊಂದನ್ನು ರೂಢಿಗೆ ತಂದಿದ್ದು, ಈ ವ್ಯವಸ್ಥೆಯು ನಿರಂತರವಾಗಿ ಮುಂದುವರಿದುಕೊಂಡು ಹೋಗುವಂತೆ ಏರ್ಪಾಟು ಮಾಡಿರುತ್ತಾರೆ.

ಕರ್ನಾಟಕ ಜಾನಪದ ಪರಿಷತ್ತು ಇದುವರೆವಿಗೂ ಸುಮಾರು 800ಕ್ಕೂ ಹೆಚ್ಚು ಮಂದಿ ಜನಪದ ಕಲಾವಿದರನ್ನು ಗುರತಿಸಿ ಗೌರವಿಸಿ ಜಾನಪದ ಲೋಕ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿರುತ್ತದೆ.

ಗಾಳಿಪಟ ಉತ್ಸವ

ಭಾರತದಲ್ಲಿ ಹಲವು ಭಾಗಗಳಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟವನ್ನು ಹಾರಿಸುವ ಸಂಪ್ರದಾಯವಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಜುಲೈ ತಿಂಗಳ ಆಶಾಡ ಮಾಸದಲ್ಲಿ ಹಾರಾಡುವ ಗಾಳಿಟಗಳು ಬಾನ್ನೆತ್ತರಕ್ಕೆ ಹಾರಾಡುತ್ತವೆ. ಗಾಳಿಪಟ ಎಂಬದು ಕಾಗದ, ಪಾಸ್ಟಿಕ್ ಅಥವಾ ಬಟ್ಟೆಯಿಂದ ತಯಾರಿಸಲ್ಪಟ್ಟ ಗಾಳಿಯ ಸಹಾಯದಿಂದ ಹಾರುವ, ಅದಕ್ಕೆ ಕಟ್ಟಿದ ದಾರದಿಂದ ನಿಯಂತ್ರಿಸಬಹುದಾದ ಒಂದು ಸಾಧನ. ಸೂತ್ರದ ದಾರ ಪಟವನ್ನು ಗಾಳಿಯಲ್ಲಿ ಹಾರಾಡುವಂತೆ ಮಾಡುತ್ತದೆ ಹಾಗೂ ಗಾಳಿಪಟ ಕ್ರಮಿಸಬೇಕಾದ ದೂರ ಮತ್ತು ಎತ್ತರವನ್ನು ನಿಯಂತ್ರಿಸುತ್ತದೆ. ಗಾಳಿಪಟವನ್ನು ಒಂದು ಆಟವಾಗಿ, ಸ್ವರ್ಧೆಯಾಗಿ, ಕಲೆಯಾಗಿ, ಹಾಗೂ ಸಂಕೇತವಾಗಿಯೂ ಹಾರಿಸುವ ಪದ್ದತಿ ಇದೆ. ಇದೊಂದು ಗ್ರಾಮೀಣ ಆಟವೂ ಹೌದು. ಆಬಾಲವೃದ್ಧರಾದಿಯಾಗಿ ಸಮಸ್ತರೂ ಉತ್ಸ್ಸಾಹದಿಂದ ಪಾಲ್ಗೊಳ್ಳುವ ಕ್ರೀಡೆ ಗಾಳಿಪಟ. ನಾಡೋಜ ಎಚ್.ಎಲ್. ನಾಗೇಗೌಡರು 1986ರಲ್ಲಿ ರಾಜ್ಯ ಮಟ್ಟದ ಗಾಳಿಪಟ ಉತ್ಸವವನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷವೂ ತಪ್ಪದೇ ನಡೆದುಕೊಂಡು ಬರುತ್ತಿದೆ. ಗಾಳಿಪಟ ಹಾರಿಸುವುದು ಜಗತ್ತಿನಾದ್ಯಂತ ಮನರಂಜನೆಯ ಕ್ರೀಡೆಯಾಗಿದೆ. ಆಷಾಡಮಾಸ ಬಂತೆಂದರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೂ ಪಟಗಳನ್ನು ಹಾರಿಸಿ ಸಂತಸ ಪಡುತ್ತಾರೆ.

ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ರಾಜ್ಯ ಮಟ್ಟದ ಗಾಳಿಪಟ ಉತ್ಸವವನ್ನು ವರ್ಣರಂಜಿತವಾಗಿ ಅದ್ದೂರಿಯಿಂದ ಆಚರಿಸುತ್ತಾ ಬರುತ್ತಿದೆ. ಬಾನಿನ ಎತ್ತರಕ್ಕೆ ಗಾಳಿಪಟಗಳಂತೆ ಮನುಷ್ಯನ ವ್ಯಕ್ತಿತ್ವವೂ ಸಹ ಎತ್ತರಕ್ಕೇರಬೇಕೆಂಬುವುದು ಕಾರ್ಯಕ್ರಮದ ಆಶಯ. ಜೀವನದಲ್ಲಿ ಉತ್ಸಾಹ, ಸಾರ್ಥಕತೆಗೆ ಕಾರಣವಾಗುವ ಇಂಥ ಜನಪದ ಕ್ರೀಡೆಗಳಿಗೆ ಪ್ರೋತ್ಸಾಹವನ್ನು ಕರ್ನಾಟಕ ಜಾನಪದ ಪರಿಷತ್ತು ನಿರಂತರವಾಗಿ ನೀಡುತ್ತಾ ಬಂದಿದೆ. ರಾಜ್ಯದ ನಾನಾ ಮೂಲೆಗಳಿಂದ ಅಸಂಖ್ಯಾ ಸ್ಪರ್ಧಿಗಳು ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಾಂಪ್ರದಾಯಿಕವಾಗಿ ಗಾಳಿಪಟಗಳನ್ನು ತಯಾರಿಸಿ ಹಾರಿಸುವ ಹೊಸಮಾದರಿಯ ನವೀನ ವಿನ್ಯಾಸಗಳ ಗಾಳಿಪಟಗಳನ್ನು ಹಾರಿಸುವುದು. ಮಕ್ಕಳು ಹಾರಿಸುವ ಪಟ, ಏರಿದ ಎತ್ತರ ಕಂಡು ಸಂತಸಪಟ್ಟು ನಲಿದಾಡಿದ ತಂದೆ ತಾಯಂದಿರಿಗಂತೂ ಲೆಕ್ಕವಿಲ್ಲ. ಬೋರಂಟಿ, ಗುಂಡುಚಕ್ರ. ಸಾದಾ, ಸರಮಾಲೆ ಪಟಗಳಲ್ಲದೆ ವಿಮಾನ, ಹಾವು, ಮೀನು, ನಕ್ಷತ್ರ, ಕಳಸ, ಚಂದ್ರ, ಜೋಡಿ ನವಿಲು, ಪಂಚಮುಖಿ, ತೇರು, ಗಂಡಬೇರುಂಡ ಹೀಗೆ ವೈವಿಧ್ಯಮಯ ವಿನ್ಯಾಸಗಳ ನೂರಾರು ಗಾಳಿಪಟಗಳು ಆಕಾಶದಲ್ಲಿ ಚಿತ್ತಾರ ಬರೆದಂತೆ ಇರುತ್ತವೆ. ಉತ್ಸವದಲ್ಲಿ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ವಯಸ್ಸಿನ ಆಧಾರದ ಮೇಲೆ ನಿಗದಿ ಮಾಡಿ ಕಾರ್ಯಕ್ರಮಕ್ಕೆ ಬಂದ ತೀರ್ಪುಗಾರರ ನಿರ್ಣಯದ ಮೇಲೆ ಬಹುಮಾನಗಳನ್ನು ನೀಡಲಾಗುತ್ತದೆ. ಮುಂಜಿದಾರವನ್ನು ಗಾಳಿಪಟಕ್ಕೆ ಅಳವಡಿಸದಂತೆ ಜಾಗೃತಿ ಮೂಡಿಸಲಾಗುತ್ತದೆ. ಈ ಕ್ರೀಡೆಯನ್ನು ಕರ್ನಾಟಕ ಜಾನಪದ ಪರಿಷತ್ತು ನಶಿಸಿ ಹೋಗದಂತೆ ಇಂದಿಗೂ ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಿಶ್ವ ಜಾನಪದ ದಿನಾಚಾರಣೆ

ಎಲ್ಲ ಕಲೆಗಳ ಮೂಲ ಬೇರು ಜಾನಪದ. ಯಾವುದೇ ಕಲೆ ದೇಶ, ಭಾಷೆ, ಜಾತಿ, ಧರ್ಮ, ಮೀರಿ ಬೆಳೆದಿರುತ್ತದೆ. ಜಾನಪದ ಪಾರಂಪರಿಕ ಜ್ಞಾನವಾಗಿದೆ. ಈ ಜ್ಞಾನದಲ್ಲಿ ಸಾಧಕ, ಬಾಧಕಗಳಿವೆ. ಅವುಗಳನ್ನು ಸರಿದೂಗಿಸಿ ಶೈಕ್ಷಣಿಕ ಶಿಸ್ತಿಗೆ ಅಳವಡಿಸುವ ಪ್ರಯತ್ನ ಅವಿರತವಾಗಿ ನಡೆದಿದೆ. ಜಗತ್ತಿನ ಎಲ್ಲ ಭಾಷೆ, ಪ್ರದೇಶಗಳಲ್ಲೂ ಜಾನಪದ ಇದೆ. ಜಾನಪದ ನಮ್ಮ ಪರಂಪರೆ ಅದನ್ನು ಪೋಷಿಸುವ ಕೆಲಸವನ್ನು ನಾವೆಲ್ಲ ಮಾಡುವ ಅಗತ್ಯವಿದೆ.

ಜನಪದ ಕಲೆ ಮತ್ತು ಸಂಸ್ಕøತಿಗೆ ಲಿಪಿಯಲಿಲ್ಲ. ಮೌಖಿಕವಾಗಿ ಹರಿದು ಬಂದಿದೆ. ಈ ಮೌಖಿಕ ಸಂಸ್ಕøತಿಗೆ 1846ರಲ್ಲಿ ವಿಲಿಯಂ ಜಾನ್ ಥಾಮ್ಸ್ ‘ಪೋಕ್ಲರ್’ (ಜಾನಪದ) ಶಬ್ದವನ್ನು ಸೃಷ್ಠಿಸಿದ ನೆನಪಿಗಾಗಿ ಆಗಸ್ಟ್ 22 ರಂದು ಪ್ರತಿವರ್ಷ ವಿಶ್ವ ಜಾನಪದ ದಿನಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ಯುನೆಸ್ಕೋ ವಿಶ್ವ ಜಾನಪದ ದಿನಾಚರಣೆಯನ್ನಾಗಿ ಘೋಷಿಸಿದೆ. ಕಳೆದ ಆರು ವರ್ಷಗಳಿಂದ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಕರ್ನಾಟಕ ಸಾಹಸ ಕಲಾ ಅಕಾಡೆಮಿ ಮತ್ತು ಸಂಭ್ರಮ ಬೆಂಗಳೂರು ಇವರ ಸಹಯೋಗದಲ್ಲಿ ಜಾನಪದ ಲೋಕದಲ್ಲಿ ಪ್ರತಿವರ್ಷವೂ ವಿಶ್ವ ದಿನಾಚರಣೆಯನ್ನು ಜನಪದ ಕಲಾತಂಡಗಳೊಂದಿಗೆ ಆಚರಿಸಲಾಗುತ್ತಿದೆ.

ವಿಶ್ವ ಜಾನಪದ ದಿನಾಚರಣೆ ಎಂದರೆ ಜಾನಪದ ಕಲಾವಿದರ ದಿನ. ಸಾಮಾನ್ಯವಾಗಿ ಜಾನಪದ ಕಲಾವಿದರು ಕೃಷಿಕರು ಮತ್ತು ಬಡ ಕೂಲಿಕಾರರು. ತಮ್ಮ ಬಿಡಿವಿನ ಸಮಯದಲ್ಲಿ ತಾವು ನಂಬಿದ ಅಥವಾ ತಮ್ಮ ಪೂರ್ವಜರಿಂದ ಬಂದ ಕಲೆಯನ್ನು ಪ್ರದರ್ಶಿಸುತ್ತಾರೆ. ಕಲೆ, ಸಂಪ್ರದಾಯ, ಉಡುಗೆ ತೊಡುಗೆ, ಭಾಷೆ ಸಂಸ್ಕøತಿ ಎಲ್ಲವೂ ಮಾನವೀಯ ಸಂಬಂಧಗಳ ಸರಪಣಿಗಳಿದ್ದಂತೆ. ಕಾಲಕ್ಕೆ ತಕ್ಕಂತೆ ಹೊಸತನವನ್ನು ರೂಡಿಸಿಕೊಂಡರೆ ಮಾತ್ರ ಜಾನಪದ ಉಳಿಯಲು ಸಾಧ್ಯ. ಮೂಲದಿಂದ ಬಂದಿದ್ದು ಮಾತ್ರ ನಿಜವಾದ ಜಾನಪದ ಎಂದು ಹೇಳಲಾಗುತ್ತದೆ. ಹಳೆಯದ್ದನ್ನೇ ನಂಬಿದರೆ ಜಾನಪದ ವಸ್ತುಸಂಗ್ರಹಾಲಯ ಸೇರುತ್ತದೆ. ಆದ್ದರಿಂದ ಹಳೆಯದನ್ನು ದಾಖಲೀಕರಣ ಮಾಡಿಕೊಳ್ಳುತ್ತಾ, ಹೊಸದÀನ್ನು ರೂಡಿಸಿಕೊಳ್ಳಬೇಕು. ಜಾನಪದವನ್ನು ಜಡತ್ವದಿಂದ ಚಲನಶಿಲದತ್ತ ಕೊಂಡೊಯ್ಯೊಬೇಕು. ಜಾನಪದ ಸಂಸ್ಕøತಿಯ ಮಹತ್ವ ಇರುವುದೇ ಬಹುತ್ವದಲ್ಲಿ. ಜಾನಪದ ಎನ್ನುವುದೇ ದೊಡ್ಡ ಸಂಸ್ಕøತಿ. ಹೀಗೆ ಎಲ್ಲವನ್ನೂ ಒಗ್ಗೂಡಿಸುವುದು ಜಾನಪದ ಮಾತ್ರ ಜಾನಪದ ಕಲಾವಿದರ ಬದುಕು ಉಳಿದರೆ ಮಾತ್ರ ಕಲೆ ಉಳಿಯಲು ಸಾಧ್ಯ. ಜಾನಪದ ವಿಕಾಸ ನಿರಂತರವಾಗಿ ಇರಬೇಕಾದರೆ ಕಲಾವಿದರಿಗೆ ಸರ್ಕಾರ ಮತ್ತು ಸಮಾಜ ಸೂಕ್ತ ಪ್ರೋತ್ಸಾಹ ನೀಡಬೇಕು ಎನ್ನುವುದೇ ಈ ದಿನದ ವಿಶೇಷ.

ದಸರಾ ಆಚರಣೆ

ದಸರಾ ಎಂದೊಡನೆ ನಮಗೆ ನೆನಪಾಗುವುದು ಮೈಸೂರಿನಲ್ಲಿ ನಡೆಯುವ ಒಂಬತ್ತು ದಿನಗಳ ನವರಾತ್ರಿ ಹಬ.್ಬ ಒಂಬತ್ತನೇ ದಿನ ನಂದಿಪೂಜೆ, ಬನ್ನೀಪೂಜೆ ಅದ್ದೂರಿಯಾಗಿ ನಡೆಯುವ ಅಂಬಾರಿ ಹೊತ್ತ ಗಜರಾಜನ ಮೆರವಣಿಗೆ ನವರಾತ್ರಿ ದಸರಾ ದಿನಗಳಲ್ಲಿ ಚಾಮುಂಡೇಶ್ವರಿಯ ವಿವಿಧ ಅವತಾಗಳಾದ ದುರ್ಗೆ, ಭುವನೇಶ್ವರಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಶಕ್ತಿಮಾತೆ ಎನಿಸಿರುವ ದೇವಿ ಆರಾಧನೆಯ ಕಾಲ. ಕನ್ನಡ ನಾಡಿನ ನೆಲದ ಸಂಸ್ಕøತಿಯನ್ನು ಸಂರಕ್ಷಿಸುತ್ತಿರುವ ಜಾನಪದ ಕಲಾವಿದರ ಕಾಶಿ ಹಾಗೂ ತೌರು ಎನಿಸಿಕೊಂಡಿರುವ ಜಾನಪದ ಲೋಕ ಆರಂಭಗೊಂಡ ವರ್ಷದಿಂದ ಪ್ರತಿ ವರ್ಷವು ದಸರಾ ಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ನಡೆಯುವ ದಸರಾ ಆಚರಣೆಯಲ್ಲಿ ಬನ್ನಿ ಮುರಿಯುವುದು, ದಸರಾ ಗೊಂಬೆಗಳ ಪ್ರದರ್ಶನ, ಜನಪದ ಕಲಾಪ್ರದರ್ಶನ ವ್ಯವಸ್ಥೆಗೊಳಿಸಲಾಗುವುದು. ಜಾನಪದ ಲೋಕ ಈಗಿನ ಮೈಸಿರಿಯನ್ನು ಪಡೆಯುವ ಬಹುಮುನ್ನವೇ ಬರಡು ನೆಲವಾಗಿದ್ದಾಗ 1988ರಲ್ಲಿಯೇ ಐದುನೂರು ಕಲಾವಿದರನ್ನು ಕರೆಸಿ ಕುಸ್ತಿಯು ಸೇರಿದಂತೆ ಕಲಾಪ್ರದರ್ಶನದ ಬಹುದೊಡ್ಡ ಕಾರ್ಯಕ್ರಮ ನಡೆಸಲಾಗಿತ್ತು. ಅಲ್ಲಿಂದ ಪ್ರತಿವರ್ಷ ದಸರಾ ವೇಳೆಯಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ಹಮ್ಮಿಕೊಂಡು ನಡೆಸಲಾಗುತ್ತಿದೆ.

ನಾಡಹಬ್ಬವಾದ ದಸರಾ ಕಾಲದಲ್ಲಿ ಮೈಸೂರು ಸೀಮೆಯ ಮನೆಮನೆಗಳಲ್ಲೂ ಬೊಂಬೆಗಳನ್ನು ಕೂರಿಸುವ ಮೂಲಕ ಅಲಂಕಾರಿಕ ಕೌಶಲ್ಯ ತೆರೆದುಕೊಳ್ಳುತ್ತದೆ. ತಾವೇ ಸಿದ್ದಮಾಡಿದ, ಸಂಗ್ರಹಿಸಿದ ಗೊಂಬೆಗಳನ್ನು ಗುಂಪಾಗಿ ವಿಭಾಗಿಸಿ, ಪೂರಕ ವಾತಾವರಣ ರೂಪಿಸಿ ಪ್ರದರ್ಶಿಸುವ ವಿಶಿಷ್ಟ ಪದ್ಧತಿಯನ್ನು ಜನಪದ ಸಂಸ್ಕøತಿಯ ಪ್ರಾತಿನಿಧಿಕ ಸಂಸ್ಥೆ ಜಾನಪದ ಲೋಕದಲ್ಲಿ ಒಂದು ತಿಂಗಳುಗಳ ಕಾಲ ಗೊಂಬೆಗಳ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಆಕರ್ಷಕವಾದ ದಸರಾ ಗೊಂಬೆಗಳ ಪ್ರದರ್ಶನವನ್ನು ವ್ಯವಸ್ಥೆಮಾಡಿ ಪ್ರವಾಸಿಗರು ನೋಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪಟ್ಟದ ಗೊಂಬೆಗಳು. ರಾಮಾಯಣ ಮಹಾಭಾರತಕ್ಕೆ ಸಂಬಂಧಿಸಿದ ದೃಶ್ಯವಳಿಗಳು, ಹಾವಾಡಿಗ, ಕೀಲುಕುದುರೆ, ದೇವಾನು ದೇವತೆಗಳ ಮದುವೆ, ಸಂಗೀತ ಕಛೇರಿ ಮೊದಲಾದ ಗೊಂಬೆಗಳ ಗುಂಪುಗಳು ಪ್ರೇಕ್ಷಕರ ಮನಸೊರೆಗೊಳ್ಳುತ್ತವೆ. ವಿಜಯದಶಮಿ ದಿನ ಶಮಿವೃಕ್ಷವನ್ನು ಪೂಜಿಸಿ ಬನ್ನಿ ಪತ್ರೆ ವಿನಿಮಯ ಮಾಡಲಾಗುತ್ತದೆ.

ಯುವ ಜನರಿಗಾಗಿ ಜಾನಪದ ಪ್ರದರ್ಶನ ಕಲೆಗಳ ಸ್ಪರ್ಧೆ ಮತ್ತು ಉತ್ಸವ

ಶ್ರೀ ಟಿ. ತಿಮ್ಮೇಗೌಡ ಐ.ಎ.ಎಸ್(ನಿ) ಹಿಂದಿನ ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು ಇವರು ನೀಡಿರುವ ದತ್ತಿನಿಧಿಯಿಂದ ಯುವ ಜನರಲ್ಲಿ ಜಾನಪದದ ಬಗ್ಗೆ ಜಾಗೃತಿ ಮೂಡಿಸಿ ಮುಂದಿನ ತಲೆಮಾರಿಗೆ ಜನಪದ ಕಲೆಗಳನ್ನು ಪರಿಚಯಿಸಿ ಮುಂದುವರೆಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ.

ನಿಯಮಗಳು –
  1. ಕನ್ನಡ ನಾಡಿನ ಎಲ್ಲಾ ಜಿಲ್ಲೆಗಳಿಂದ ಸ್ಫರ್ಧಾರ್ಥಿಗಳು ಭಾಗವಹಿಸಬಹುದು
  2. ವಯೋಮಿತಿ 15 ರಿಂದ 30 ವರ್ಷ
  3. ಜಾನಪದ ಲೋಕದಲ್ಲಿ ಊಟ, ತಿಂಡಿ ಮತ್ತು ವಸತಿ ವ್ಯವಸ್ಥೆ ಇರುತ್ತದೆ.
  4. ಪ್ರದರ್ಶನ ಕಲೆಗಳ ಸ್ಪರ್ಧೆಯಲ್ಲಿ ಒಟ್ಟು 05 ಬಹುಮಾನಗಳಿರುತ್ತದೆ.
  5. ಸ್ಪರ್ಧಿಗಳು ಯಾವುದಾದರೂ ಜನಪದ ಕಲೆಯನ್ನು ಮೂಲ ಸ್ವರೂಪಗಳನ್ನು ಅಭ್ಯಾಸ ಮಾಡಿ ತಂಡಗಳ ಸಮೇತ ಬರಬೇಕು
  6. ಕಲೆಯ ನೃತ್ಯಗಾರಿಕೆ, ಹಿನ್ನಲೆ ಗಾಯನ, ವಾದ್ಯ ವೇಷ-ಭೂಷಣಗಳನ್ನು ಸ್ಪಧಾರ್ಥಿಗಳೇ ತರಬೇಕು ಆ ವಸ್ತುಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ.
  7. ಕಂಸಾಳೆ, ವೀರಗಾಸೆ, ಡೊಳ್ಳು, ತಮಟೆ, ನಗಾರಿ, ಕೋಲಾಟ, ಪೂಜಾಕುಣಿತ, ಪಟಾಕುಣಿತ – ಹೀಗೆ ಜನಪದ ನೃತ್ಯ ಕಲೆಗಳಿಗೆ ಅವಕಾಶ
  8. 3 ಜನ ಹಿರಿಯ ಜನಪದ ಕಲಾವಿದರು, ಸಂಘಟಕರು, ವಿದ್ವಾಂಸರು ತೀರ್ಪುಗಾರರಾಗಿರುತ್ತಾರೆ. ತೀರ್ಪುಗಾರರ ನಿರ್ಣಯವೇ ಅಂತಿಮ
  9. ಒಂದು ಕಲೆಯ ಪ್ರದರ್ಶನಕ್ಕೆ 15 ನಿಮಿಷ ಕಾಲಾವಕಾಶ ನೀಡಲಾಗುವುದು
  10. ಸ್ಪರ್ಧಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಜಾನಪದ ಲೋಕಕ್ಕೆ ಬಂದು ಹೋಗಬೇಕು

ಗ್ರಾಮೀಣ ಆಟಗಳು – ಸ್ಪರ್ಧೆ ಮತ್ತು ಉತ್ಸವ

ನಾಡೋಜ ಡಾ.ಜಿ.ನಾರಾಯಣ ಅವರ ನೆನಪಿನಲ್ಲಿ ಜಾನಪದ ಲೋಕದಲ್ಲಿ ಡಿಸೆಂಬರ್ ತಿಂಗಳಲ್ಲಿ ಗ್ರಾಮೀಣ ಆಟಗಳ ಉತ್ಸವ ನಡೆಯುತ್ತಿದ್ದು ಗ್ರಾಮೀಣ ಪರಿಸರದಲ್ಲಿ ಕಣ್ಮರೆಯಾಗುತ್ತಿರುವ ಹಳ್ಳಿ ಆಟಗಳಾದ ಕುಂಟಬಿಲ್ಲೆ, ಗೋಲಿ, ಬುಗರಿ, ಚಂಡಾಟ, ಅಣ್ಣೆಕಲ್ಲಾಟ, ಚಕ್ರಬಂಡಿ ಹೊಡೆಯುವ ಆಟ, ಹಗ್ಗ ಜಗ್ಗಾಟಲ, ಲಗೋರಿ ಚಂಡು, ಚಿನ್ನಿದಾಂಡು, ರತ್ತೋರತ್ತೋ ರಾಯನ ಮಗಳೆ, ಕಣ್ಣಾಮುಚ್ಚಾಲೆ, ಬಳೆಚೂರಾಟ, ಗೋಲಿ ಆಟ, ಬುಗುರಿ ಆಟ, ಚೌಕಾಬಾರ, ಅಳಿಗುಳಿಮನೆ, ಕಲ್ಲುಕುಟ್ಕುಟ ದಂತಹ ಆಟಗಳು ಆಧುನಿಕತೆಯ ಭರಾಟೆಯಲ್ಲಿ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಜನಪದರ ಕಲೆ, ಸಾಹಿತ್ಯ, ಸಂಸ್ಕøತಿ ಸಂರಕ್ಷಿಸುವ ಮಹತ್ತರ ಕಾರ್ಯವನ್ನು ಕರ್ನಾಟಕ ಜಾನಪದ ಪರಿಷತ್ತು ಮಾಡುತ್ತಿದೆ. ಜೊತೆಗೆ ಮಕ್ಕಳಲ್ಲಿ ಉತ್ಸಾಹ ಲವಲವಿಕೆ ತುಂಬುವ ಮನೋಭೂಮಿಕೆ, ಹದವಾದ ವ್ಯಾಯಾಮ ನೀಡುವಂತಹ, ಕಾಸುಕೊಟ್ಟು ಕೊಂಡುಕೊಳ್ಳಬೇಕಾದ ಅಗತ್ಯಗಳೇ ಇಲ್ಲದ ನಮ್ಮ ಸುತ್ತ ಸಹಜವಾಗಿ ದೊರೆಯುವ ಪರಿಕರಗಳನ್ನು ಬಳಸಿ ಮನರಂಜನೆಯನ್ನು ಪಡೆಯುತ್ತಿದ್ದ ಆಟಗಳನ್ನು ಆಡಿಸಲಾಗುತ್ತಿದೆ. ಮನಸ್ಸಿಗೆ ಸಂತಸ ತುಂಬುವ ಗ್ರಾಮೀಣ ಆಟಗಳತ್ತ ಹೊಸ ತಲೆಮಾರಿನ ಮಕ್ಕಳನ್ನು ತೊಡಗಿಸುವ ಉದ್ದೇಶದಿಂದ ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದಲ್ಲಿ ಗ್ರಾಮೀಣ ಆಟಗಳ ಉತ್ಸವ ಸ್ಪರ್ಧೆ ಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳುಲಾಗುತ್ತಿದೆ.
ಜಾಗತೀಕರಣ, ಆಧುನಿಕ ದೃಶ್ಯ ಮಾದ್ಯಮಗಳಿಂದ ಗ್ರಾಮೀಣ ಕ್ರೀಡೆಗಳು ನಶಿಸುತ್ತಿದ್ದು ಇವುಗಳನ್ನು ಉಳಿಸುವ ನಿಟ್ಟಿನಲ್ಲಿ ಜಾನಪದ ಲೋಕ ಮತ್ತು ಪರಿಷತ್ತು ಅವಿರತವಾಗಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಸಂಜೆ ಜನಪದ ಕಲೆಗಳ ಪ್ರದರ್ಶನ ಹಾಗೂ ಗ್ರಾಮೀಣ ಆಟಗಳ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಕೆಲವು ಆಯ್ದ ಆಟಗಳಿಗೆ ನಗದು ಬಹುಮಾನ, ಒಂದೇ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚು ಅಂಕ ಪಡೆದರೆ ಪರ್ಯಾಯ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸುತ್ತಿದೆ. ಜಾಗತಿಕ ಭರಾಟೆಗೆ ಸಿಲುಕಿದ ಗ್ರಾಮೀಣ ಕ್ರೀಡೆಗಳು ವಿನಾಶದ ಅಂಚಿಗೆ ತಲುಪುತ್ತಿವೆ. ನಾಡಿನ ಸಾಂಸ್ಕøತಿಕ ಪ್ರತಿರೂಪದ ಆಟೋಟಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಅಗತ್ಯವಿದೆ. ಜನಪದ ಕಲೆಗಳು ಸ್ಥಳೀಯ ಸಂಸ್ಕøತಿ ಮತ್ತು ಪೂರ್ವಜರ ಜೀವನದ ನಂಟನ್ನು ಬೆಸೆಯುವುದರಿಂದ ಯುವಶಕ್ತಿ ಜನಪದ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕು.