ಜಾನಪದ ಲೋಕ

ಕನ್ನಡ ನಾಡಿನ 20ನೆಯ ಶತಮಾನದ ಚರಿತ್ರೆಯ ಅದ್ಭುತಗಳಲ್ಲಿ ಒಂದು ನಾಗೇಗೌಡರು ರೂಪಿಸಿದ ಜಾನಪದ ಲೋಕ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ರಾಮನಗರದ ಬಳಿ ಸುಮಾರು 15 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಜಾನಪದ ಲೋಕವು ನಾಗೇಗೌಡರ ಕಠಿಣ ಪರಿಶ್ರಮ, ಸಂಘಟನಾ ಶಕ್ತಿಯ ಫಲವಾಗಿ 1994ರ ಮಾರ್ಚ್ 12 ರಂದು ಆರಂಭವಾಯಿತು. ಕಳೆದ ಹನ್ನೆರಡು ವರ್ಷಗಳಿಂದೀಚೆಗೆ ಜಾನಪದ ಲೋಕವು ದೇಶದ ಅತ್ಯಂತ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿ ಬೆಳವಣಿಗೆ ಕಂಡಿದೆ.

ಜಾನಪದ ಲೋಕದ ಮಹತ್ವದ ಆಕರ್ಷಣೆಯೇ ಅದರ ಮಹಾದ್ವಾರ. ಹರಿಗೆ ಮತ್ತು ಕೊಂಬುಗಳಿಂದ ಅಲಂಕೃತವಾದ ವಿಶಾಲ ಮಹಾದ್ವಾರ. ಇಕ್ಕೆಲಗಳಲ್ಲಿ ಎತ್ತರದ ನಂದೀಧ್ವಜಗಳು. ಶೈವ ಮತ್ತು ವೈಷ್ಣವ ಸಂಪ್ರದಾಯಗಳೆರಡರ ಸಮ್ಮಿಲನ ಈ ಮಹಾದ್ವಾರದ ರಚನೆಯಲ್ಲಡಗಿದೆ. ಒಳಹೋಗುತ್ತಿದ್ದಂತೆ ಎದ್ದು ಕಾಣುವ ಬೀಸುವ ಕಲ್ಲಿನ ಅರ್ಥಪೂರ್ಣವಾದ ಲಾಂಛನ, ಕೋಣಗಳನ್ನು ಕಟ್ಟಿ ಎಳೆಸುತ್ತಿದ್ದ ಬೃಹತ್ತಾದ ಬೀಸುವ ಕಲ್ಲು, ಗಿರಿಜನರ ಅಡುಗೆ ಮನೆಯ ವಿವಿಧ ವಸ್ತುಗಳ ಸಂಗ್ರಹಾಲಯವಾದ ಲೋಕಮಾತಾ ಮಂದಿರ, ನಾಗೇಗೌಡರ ಜಾನಪದ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಚಿತ್ರಕುಟೀರ, ಕಲಾವಿದರು ತಂಗಲೆಂದೇ ನಿರ್ಮಿಸಿರುವ ತೊಟ್ಟಿ, ಕಂಬಗಳನ್ನೊಳಗೊಂಡ ದೊಡ್ಡಮನೆ, ಜಾನಪದಕ್ಕೆ ಸಂಬಂಧಪಟ್ಟ ಎಲ್ಲಾ ಬಗೆಯ ಸುಮಾರು 5000ಕ್ಕೂ ಹೆಚ್ಚು ವಸ್ತುಗಳನ್ನು ಕಲಾತ್ಮಕವಾಗಿ ಹಾಗೂ ವೈಜ್ಞಾನಿಕವಾಗಿ ಕಾಯ್ದಿರಿಸಿರುವ ಎರಡು ಅಂತಸ್ತುಗಳ ಕಟ್ಟಡವಾದ ಲೋಕಮಹಲ್, ಕಲ್ಲಿನಲ್ಲಿ ಕಥೆ ಹೇಳುವ ಶಿಲ್ಪಮಾಳ, ಆಯಗಾರರ ಮಾಳ, ಜಾನಪದ ಲೋಕವನ್ನು ವೀಕ್ಷಿಸಲೆಂದು ಬರುವವರನ್ನು ಹರಸಲೆಂದೇ ಇಲ್ಲಿ ನೆಲೆಯಾಗಿರುವ ಲೋಕಪ್ರಿಯ ಮಹಾಗಣಪತಿಯ ದೇವಸ್ಥಾನ. ಸುಮಾರು 80 ರಿಂದ 1000 ಮಂದಿ ಕುಳಿತುಕೊಳ್ಳಬಹುದಾದ ಗ್ರೀಕ್ ಮಾದರಿಯ ಬೃಹತ್ತಾದ ಬಯಲು ರಂಗಮಂದಿರ. ಮಕ್ಕಳ ಮನರಂಜನೆಗೆ ದೋಣಿ ವಿಹಾರ ಮತ್ತು ಆಟವಾಡಲು ವಿಶಾಲವಾದ ಆಟದ ಮಾಳ ಇತ್ಯಾದಿಗಳೆಲ್ಲವೂ ಜಾನಪದ ಲೋಕದಲ್ಲಿವೆ.

ಕರಕುಶಲ ಕಲಾವಿದರು ಈ ಲೋಕದಲ್ಲಿದ್ದುಕೊಂಡು ಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಡೊಳ್ಳು ಕುಣಿತ, ಕೋಲಾಟ, ಗೊರವರ ಕುಣಿತ ಇವೇ ಮೊದಲಾದ ಪ್ರದರ್ಶಕ ಕಲೆಗಳಲ್ಲಿ ತರಬೇತಿ ನೀಡಿ ಜಾನಪದ ಲೋಕದ್ದೇ ಆದ ಕಲಾತಂಡಗಳನ್ನು ರೂಪಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯವು ಜಾನಪದ ಲೋಕವನ್ನು ಸಂಶೋಧನಾ ಕೇಂದ್ರವಾಗಿ ಮಾನ್ಯ ಮಾಡಿದೆ. 1999ರಿಂದ ಜಾನಪದ ಮಹಾವಿದ್ಯಾಲಯವು ಪ್ರಾರಂಭವಾಗಿದ್ದು ಈ ಮಹಾವಿದ್ಯಾಲಯದಲ್ಲಿ ಜಾನಪದ ಡಿಪ್ಲೊಮಾ ಮತ್ತು ಜಾನಪದ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ನಡೆಸಲಾಗುತ್ತಿದೆ.

ಜಾನಪದ ಅಭಿರುಚಿ ಶಿಬಿರ, ಜಾನಪದ ಸಂಶೋಧನಾ ಕಮ್ಮಟ, ವಿಚಾರ ಸಂಕಿರಣಗಳನ್ನು ಜಾನಪದ ಲೋಕದಲ್ಲಿ ನಿಯತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸುಸಜ್ಜಿತವಾದ ಜಾನಪದ ಗ್ರಂಥಾಲಯ ಒಂದನ್ನು ಸ್ಥಾಪಿಸಲಾಗಿದೆ. ಪ್ರತೀ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಲೋಕೋತ್ಸವ, ಅಕ್ಟೋಬರ್ ತಿಂಗಳಿನಲ್ಲಿ ದಸರಾ ಉತ್ಸವ, ಜುಲೈ ತಿಂಗಳಿನಲ್ಲಿ ಗಾಳಿಪಟ ಉತ್ಸವಗಳನ್ನು ತಪ್ಪದೆ ಆಚರಿಸಲಾಗುತ್ತಿದೆ. ಒಟ್ಟಿನಲ್ಲಿ ಜಾನಪದ ಲೋಕವು ವಿದ್ವಾಂಸರು, ಆಸಕ್ತರು, ಸಂಶೋಧಕರ ಪಾಲಿಗೆ ಅಮೂಲ್ಯವಾದ ಆಕರ ಜಗತ್ತು. ಸಂಶೋಧಕರಿಗೆ ಸಹಸ್ರಾರು ಗ್ರಾಮೀಣ ವಸ್ತುಗಳು, ಧ್ವನಿಮುದ್ರಿಕೆಗಳು, ಉತ್ತಮ ಗ್ರಂಥಭಂಡಾರ, ವಿಡಿಯೋ ಚಿತ್ರೀಕರಣ ಮಾಹಿತಿ, ಪ್ರೇಕ್ಷಕರ ಸಲುವಾಗಿ ಜಾನಪದ ಕಲಾ ಮಹೋತ್ಸವಗಳು, ಆಸಕ್ತರಿಗೆ ಅಭಿರುಚಿ ಮೂಡಿಸುವ ಶಿಬಿರಗಳು, ಜನಪದ ಕಲೆಗಳ ತರಬೇತಿ ಶಿಬಿರಗಳು ಹೀಗೆ ನಿರಂತರ ಜಾನಪದೀಯ ಚಟುವಟಿಕೆಗಳ ಆಗರವಾಗಿರುವ ಜಾನಪದ ಲೋಕವು ಜಗತ್ತಿನ ಅತ್ಯುತ್ತಮ ಜಾನಪದ ಕೇಂದ್ರಗಳಲ್ಲಿ ಒಂದಾಗಿದೆ.

ಜಾನಪದ ಲೋಕದಲ್ಲಿ ಪ್ರವಾಸಿಗರು ನೋಡಬಹುದಾದ ಸ್ಥಳಗಳು:

ಮಹಾದ್ವಾರ

ಬೃಹದಾಕಾರದ ಕೊಂಬು ಕಹಳೆ ಹಾಗೂ ಹರಿಗೆಗಳಿಂದ ಅಲಂಕೃತವಾದ ಇಪ್ಪತ್ತು ಅಡಿಗಳಷ್ಟು ವಿಶಾಲವಾದ ಮಹದ್ವಾರ, ದ್ವಾರದ ಎರಡೂ ಬದಿಯಲ್ಲಿ ಆಕಾಶಕ್ಕೆ ಚಾಚಿ ನಿಂತ ಇಪ್ಪತ್ತಾರು ಅಡಿ ಎತ್ತರದ ಹಿತ್ತಾಳೆಯ ನಂದಿ ಧ್ವಜಗಳು ಪ್ರೀತಿಯಿಂದ ಸ್ವಾಗತಿಸುತ್ತವೆ.

ಲೋಕಮಾತಾ ಮಂದಿರ

ದುಡಿಮೆಯೇ ಉಸಿರಾದ ಹಳ್ಳಿಗರ ಬದುಕಿನಲ್ಲಿ ಸೊಗಸು ಸೊಬಗುಗಳಿಗೆ ಕೊರತೆಯಿಲ್ಲ. ಬಗೆಬಗೆಯ ಚಿತ್ತಾರ, ಚಿತ್ರಪಟಗಳು, ಗಿರಿಜನರು ಮತ್ತು ಗ್ರಾಮೀಣರ ಬಳಕೆಯ ವಿಶಿಷ್ಟ ವಸ್ತುಗಳ ವಾಡಿ ಗುಡಾಣಗಳು, ರೆಷ್ಮೆ ಮಗ್ಗ, ಒಳಮನೆ ವಸ್ತುಗಳು, ಕರ್ನಾಟಕದ ಜನಪದ ಕಲೆಗಳ ಭೂಪಟ, ದೀವರ ಹಸೆಗೋಡೆ ಚಿತ್ತಾರಗಳು, ಗ್ಲಾಸ್ ಪೈಂಟಿAಗ್‌ಗಳು, ಛಾಯಾಚಿತ್ರಗಳು, ಗಿರಿಜನರ ಬದುಕಿನ ಸಂಬAಧಿಸಿದ ವಸ್ತು ಸಾಮಾಗ್ರಿಗಳು ಇಲ್ಲಿವೆ. ಈ ಲೋಕಮಾತಾ ಮಂದಿರದ ಮುಂಭಾಗದಲ್ಲಿ ಜಾನಪದ ಲೋಕದ ಸಂಸ್ಥಾಪಕರಾದ ಶ್ರೀ ಎಚ್‌ಎಲ್ ನಾಗೇಗೌಡರ ಕಂಚಿನ ಪುತ್ಥಳಿ ಇರುವ ಮಂಟಪವಿದೆ.

ಚಿತ್ರ ಕುಟೀರ

ಈ ಕುಟೀರದಲ್ಲಿ ಪ್ರದರ್ಶಿತಗೊಂಡಿರುವ ಆಕರ್ಷಕ ವರ್ಣ ಚಿತ್ರಗಳು ನಾಡಿನ ಹಬ್ಬ ಕಲೆ ಆಚರಣೆ ಜಾತ್ರೆಗಳನ್ನು ನಮ್ಮ ಕಣ್ಣು ಮುಂದೆ ತಂದು ನಿಲ್ಲಿಸುತ್ತದೆ. ಶ್ರೀ ಎಚ್.ಎಲ್.ನಾಗೇಗೌಡರು ಕೈಗೊಂಡ ಧ್ವನಿ ಮುದ್ರಣ, ಚಿತ್ರೀಕರಣ, ವಸ್ತುಸಂಗ್ರಹ ಮೊದಲಾದ ಸಂದರ್ಭದ ಛಾಯಾಚಿತ್ರಗಳು ಹಾಗೂ ಅವರಿಗೆ ಸೇರಿದ ಅಮೂಲ್ಯ ವಸ್ತುಗಳು ಇಲ್ಲಿ ಪ್ರದರ್ಶಿತವಾಗಿವೆ. ಇವುಗಳೊಂದಿಗೆ ಬುಡಕಟ್ಟು  ಜನಾಂಗದವರ ಛಾಯಾಚಿತ್ರಗಳು, ಜನಪದ ರಂಗಭೂಮಿ ಛಾಯಾಚಿತ್ರಗಳು, ತೆಂಕುತಿಟ್ಟು ಯಕ್ಷಗಾನದ ಮುಖ ವರ್ಣಿಕೆಗಳ ಛಾಯಾಚಿತ್ರಗಳು ಪ್ರೇಕ್ಷಕರನ್ನು ಆಕರ್ಷಿಸುತ್ತವೆ. 

ಶಿಲ್ಪಮಾಳ

ಒಂದು ಸಾವಿರದ ಎರಡು ನೂರು ವರ್ಷಗಳಿಗೂ ಹಿಂದಿನ ವೀರಗಲ್ಲು, ಸತೀಕಲ್ಲುಗಳು, ಗೋಗಲ್ಲುಗಳು, ಶಾಸನ, ರಥ, ಫಿರಂಗಿ ಮೊದಲಾದವುಗಳು ತಮ್ಮ ಗತಕಾಲದ ಚರಿತ್ರೆಯನ್ನು ಹೇಳುತ್ತಾ ಇಲ್ಲಿ ನಿಂತಿವೆ. ರಾಜ ಮಹಾರಾಜರುಗಳ ಕಾಲದ ಬೃಹದಾಕಾರದ ಕಲ್ಲಿನ ತೊಟ್ಟಿಗಳೂ ಸಹ ಇಲ್ಲಿವೆ.

ಲೋಕಮಹಲ್

ಗಾರುಡಿಗೊಂಬೆಗಳು, ಕೊಡವ ದಂಪತಿಗಳು, ಮದುವೆ ಸಲಕರಣೆಗಳು, ದಸರ ಗೊಂಬೆಗಳು, ಭೂತಾರಾಧನೆ ವಿಗ್ರಹಗಳು, ಆಯುಧಗಳು. ಕೌದಿ ಕಲೆ, ಪೂಜಾ ಸಲಕರಣೆಗಳು, ತೂಕ-ಅಳತೆ ಸಾಧನಗಳು, ಅಡಿಗೆ ಮನೆಯ ಹಿತ್ತಾಳೆ ಮತ್ತು ಮರದ ಸಾಮಾಗ್ರಿಗಳ ಕೊಡವರ ವಸ್ತಿಗಳು, ದ್ಯಾಮವ್ವ, ಗಂಗೆತ್ತು, ಅಳೆತ್ತರದ ಭೂತದ ವಿಗ್ರಹಗಳು. ಮೇಲ್ಮನೆಯಲ್ಲಿ ತೊಗಲು ಗೊಂಬೆಗಳು, ಹಾಲಕ್ಕಿ ಸುಗ್ಗಿ ಕುಣಿತದ ಪ್ರತಿಮೆಗಳು, ಚರ್ಮವಾದ್ಯ, ಊದುವಾದ್ಯ, ತಾಳವಾದ್ಯಗಳು ಮತ್ತು ತಂತಿವಾದ್ಯಗಳು, ಆಟಿಕೆಗಳು, ಗಂಜೀಫಗಳು, ಓಲೆಗರಿ ಗ್ರಂಥಗಳು, ಆಭರಣಗಳು, ನಾಣ್ಯಗಳು, ಹರಿಗೆ ಮುಂತಾದ ವಸ್ತುಗಳಿವೆ.

ಆಯಗಾರರಮಾಳ

ಕಣ್ಮರೆಯಾಗುತ್ತಿರುವ ಹಳ್ಳಿಯ ಕಸಬುಗಳಾದ ಕುಂಬಾರಿಕೆ, ಕಮ್ಮಾರಿಕೆಯ ಉಪಕರಣಗಳು ಹಾಗೂ ಮರದ ಕಬ್ಬಿನ ಗಾಣ, ಎಣ್ಣೆ ಗಾಣ, ಕೊಟ್ಟಣ, ಬೇಸಾಯದ ಸಲಕರಣೆಗಳು, ಬಲೆಗಳು, ನಾಡದೋಣಿ, ಮೀನು ಕುಣಿಗಳೇ ಮೊದಲಾದ ಬೇಟೆಯ ಸಲಕರಣೆಗಳು, ಎತ್ತಿನಗಾಡಿ, ಸಾರೋಟು, ಚಿಕ್ಕ ರಥ, ಮುತ್ತಿನ ಪಲ್ಲಕ್ಕಿ ಎಲ್ಲವೂ ಇಲ್ಲಿ ಪ್ರದರ್ಶನಕ್ಕಿವೆ. ಆಯಗಾರರ ಮಾಳದಲ್ಲಿ ಸುಂದರವಾದ ಹಳ್ಳಿಮನೆಯೊಂದನ್ನು ನಿರ್ಮಿಸಲಾಗಿದೆ.

ಲೋಕಸಿರಿ

ಗೊಂದಲಿಗರು, ಬುಡಬುಡಕೆ, ಕಿನ್ನರಿಜೋಗಿ, ಗೊರವಯ್ಯ, ಸೋಮಗಳು, ದೊಡ್ಡಾಟದ ವೇಷಗಳು, ಮೂಡಲಪಾಯ ಯಕ್ಷಗಾನ ವೇಷಗಳು, ಜೋಗತಿ, ದಾಸಯ್ಯ, ಭೂತೇರು, ಲಂಬಾಣಿ ಮಹಿಳೆ, ಸೂತ್ರದ ಗೊಂಬೆಗಳು, ಬೆಂಗಳೂರು ಹಲಸೂರು ರಥದ ಕುದುರೆಗಳು, ಬಡಗುತಿಟ್ಟು ಯಕ್ಷಗಾನದ ವೇಷಗಳು, ಕೀಲುಕುದುರೆ ಕುಣಿತದ ರಾಜ-ರಾಣಿ ತೆಂಕತಿಟ್ಟು ಯಕ್ಷಗಾನದ ವೇಷಭೂಷಣದ ಪ್ರತಿಕೃತಿಗಳು, ನಂದಿ-ಪಟದ ಕುಣಿತ ಧ್ವಜಗಳಿವೆ. ಮೇಲ್ಮನೆಯಲ್ಲಿ ಮಕ್ಕಳ ಆಟಿಕೆಗಳು, ಚೌಮುಖವಾಡಗಳು, ಭೂತದ ದೇವರ ಅಡಿಕೆ ಪಟ್ಟಿಗಳು, ಪೂಜಾ ಸಲಕರಣೆಗಳು, ಗಾರುಡಿ ಗೊಂಬೆ ಮುಖವಾಡಗಳು, ಕಾಸರಗೋಡು ಭಾಗದ ಯಕ್ಷಗಾನದ ವೇಷಗಳಿವೆ.

ಬಯಲು ರಂಗಮಂದಿರ

ಗ್ರೀಕ್ ರಂಗಮAದಿರದ ವಿನ್ಯಾಸವನ್ನು ಹೊಂದಿರುವ ಬಯಲು ರಂಗಮAದಿರವು ಸುಮಾರು ಒಂದು ಸಾವಿರ ಪ್ರೇಕ್ಷಕರು ಒಮ್ಮೆಗೆ ಕೂರಬಹುದಾದಷ್ಟು ವಿಶಾಲವಾಗಿದೆ. ಬಯಲು ರಂಗಮAದಿರಕ್ಕೆ ಹೊಂದಿಕೊAಡAತೆ ಸಾಕಷ್ಟು ಸುಸಜ್ಜಿತವಾದ ಪ್ರಸಾಧನ ಕೊಠಡಿಯು ಇದೆ. ಈ ರಂಗಮAದಿರವನ್ನು ಭಾರತದ ಅತ್ಯಂತ ಶ್ರೇಷ್ಠ ರಂಗಭೂಮಿ ನಿರ್ದೇಶಕರಾದ ದಿವಂಗತ ಬಿ.ವಿ.ಕಾರಂತರವರು ಮುಕ್ತ ಕಂಠದಿAದ ಪ್ರಶಂಸಿಸಿರುತ್ತಾರೆ.

ಲೋಕ ಸರೋವರ

ಜಾನಪದ ಲೋಕದ ಒಳಭಾಗದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಕೃತಕವಾಗಿ ನಿರ್ಮಿಸಿರುವ ಸುಂದರವಾದ ಲೋಕ ಸರೋವರವಿದೆ. ತಿಳಿನೀರಿನಿಂದ ಕೂಡಿದ ಈ ಸರೋವರದಲ್ಲಿ ಮಕ್ಕಳಿಗಾಗಿ ದೋಣಿ ವಿಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ವಿಡಿಯೋ ಸ್ಕೋಪ್ ಥಿಯೇಟರ್

ಬಯಲು ರಂಗಮAದಿರದ ಹಿಂಭಾಗದಲ್ಲಿ ಇರುವ ವಿಡಿಯೋ ಸ್ಕೋಪ್ ಥಿಯೇರ‍್ನಲ್ಲಿ ಜನಪದ ಕಲೆಗಳು, ಸಂಸ್ಕೃತಿ, ಸಂಗೀತಕ್ಕೆ ಸಂಬAಧಿಸಿದ ಸಾಕ್ಷö್ಯಚಿತ್ರಗಳನ್ನು ವಿಶಾಲವಾದ ಪರದೆಯ ಮೇಲೆ ಆರಾಮವಾಗಿ ಕುಳಿತು ವೀಕ್ಷಿಸಬಹುದಾದ ವ್ಯವಸ್ಥೆಯಿದೆ.

ಮಕ್ಕಳಆಟದಮೈದಾನ

ಎರಡರಿಂದ ಹತ್ತು ವರ್ಷಗಳವರೆಗಿನ ಮಕ್ಕಳಿಗೆ ಆಡಬಹುದಾದ ಆಟದ ಮೈದಾನವು ಸಹಜ ಪ್ರಕೃತಿಯ ಮಧ್ಯೆ ಸುಂದರವಾಗಿ ಇದ್ದು, ಮಕ್ಕಳಿಗೆ ಆಡಲು ಸೂಕ್ತವಾಗಿದೆ.

ಗೊಂಬೆ ರಂಗಭೂಮಿ

ವಿಡಿಯೋ ಸ್ಕೋಪ್ ಥಿಯೇಟರ್‍ನ ಎಡಭಾಗದಲ್ಲಿ ಪುಟ್ಟದೊಂದು ಗೊಂಬೆ ರಂಗಭೂಮಿಯನ್ನು ನಿರ್ಮಾಣಮಾಡಲಾಗಿದೆ. ತೊಗಲುಗೊಂಬೆ ಮತ್ತು ಸೂತ್ರದ ಗೊಂಬೆಯಾಟಗಳನ್ನು ಪ್ರದರ್ಶಿಸಲು ಅನುಕೂಲವಾಗಿರುವ ಈ ರಂಗಮಂದಿರದಲ್ಲಿ ಸುಮಾರು 50 ಮಂದಿ ಒಟ್ಟಿಗೆ ಕುಳಿತು ನೋಡುವ ಸೌಲಭ್ಯವಿದೆ.

ಸರಸ್ವತಿ ಮಂದಿರ

ಲೋಕ ಸರೋವರದ ದಂಡೆಯ ಮೇಲಿರುವ ಎರಡು ಅಂತಸ್ತುಗಳ ಸರಸ್ವತಿ ಮಂದಿರವಿದೆ. ಕೆಳ ಅಂತಸ್ತಿನಲ್ಲಿ ವಿಶಾಲವಾದ ಸಭಾ ಭವನವಿದೆಮತ್ತು ಅಪರೂಪದ ಕೃತಿಗಳನ್ನೊಳಗೊಂಡ  ಜಾನಪದ ಗ್ರಂಥಾಲಯವಿದೆ.

ಅಲಸೂರು ರಥ

ಬೆಂಗಳೂರಿನ ಇತಿಹಾಸ ಪ್ರಸಿದ್ಧವಾದ ಹಲಸೂರು ಸೋಮೇಶ್ವರ ದೇವಸ್ಥಾನದ ಭಗ್ನ ರಥ ಇಲ್ಲಿದೆ. ಅಗ್ನಿ ಆಕಸ್ಮಿಕಕ್ಕೆ ಒಳಗಾಗಿ ಧಾರ್ಮಿಕ ಪೂಜೆಯಿಂದ ವಂಚಿತವಾಗಿದ್ದ ಈ ರಥವನ್ನು ಇಡಿಯಾಗಿ ತಂದು ಇರಿಸಲಾಗಿದೆ. ಅಪರೂಪದ ಕೆತ್ತನೆಯಿಂದ ಕೂಡಿದ ಸೂಕ್ಷö್ಮ ಕಲಾಕೃತಿಗಳನ್ನು ಒಳಗೊಂಡಿರುವ ರಥವಿದು..

ದೊಡ್ಡ ಮನೆ

ಹನ್ನೆರಡು ಕಂಬಗಳ ತೊಟ್ಟಿ ಮನೆ. ವಿಶಾಲವಾದ ಹಜಾರ, ಹಸಿರು ಹುಲ್ಲಿನ ಹಾಸು ಇದ್ದು, ಜನಪದ ಕಲಾವಿದರು ತಂಗಲು ಸುಸಜ್ಜಿತವಾದ ವಸತಿ ವ್ಯವಸ್ಥೆ ಇಲ್ಲಿದೆ. ದೊಡ್ಡಮನೆಗೆ ಹೊಂದಿಕೊAಡAತೆ ಅಡುಗೆಮನೆಗೆ, ಸ್ನಾನಗೃಹ, ಶೌಚಾಲಯಗಳು ಇವೆ. ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು ಯಾವುದೇ ಬಗೆಯ ಅಲ್ಪಾವಧಿ, ದೀರ್ಘಾವಧಿ ಅಥವಾ ಕಮ್ಮಟಗಳು, ಶಿಬಿರಗಳು, ವಿಚಾರ ಸಂಕಿರಣಗಳನ್ನು ನಡೆಸಲು ಬೇಕಾದ ಎಲ್ಲ ಅನುಕೂಲವೂ ಇಲ್ಲಿ ಲಭ್ಯವಿದೆ.

ಗ್ರಾಮೀಣ ಬದುಕಿನ ಪ್ರಾತ್ಯಕ್ಷಿಕೆಗಳ ನಿರ್ಮಾಣ

ಗ್ರಾಮೀಣ ಪ್ರದೇಶಗಳಲ್ಲಿ ಹಲವು ವರ್ಷಗಳ ಹಿಂದೆ ಕಂಡು ಬರುತ್ತಿದ್ದ ದೈನಂದಿನ ಜೀವನ ಶೈಲಿಯನ್ನು ಬಿಂಬಿಸುವAತಹ ಕಲಾಕೃತಿಗಳು ಇವೆ. ಈ ಕಲಾಕೃತಿಗಳು ನೈಜವಾಗಿ ಮೂಡಿ ಬಂದಿದ್ದು ಈಗಾಗಲೇ ಸಾಕಷ್ಟು ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಜಾನಪದ ಮಂಟಪ ಮತ್ತು ಕಿನ್ನರಿ ಮತ್ತು ಕಂಸಾಳೆ

ಜಾನಪದ ಕಲಾವಿದರಿಗೆ, ವಿದ್ವಾಂಸರಿಗೆ ಮತ್ತು ಜಾನಪದಾಸಕ್ತರಿಗೆ ಅನುಕೂಲವಾಗುವಂತೆ, ಗೋಷ್ಟಿ, ವಿಚಾರ ಸಂಕಿರಣ ಮತ್ತು ಕಮ್ಮಟಗಳನ್ನು ಆಯೋಜಿಸಲು ಸೂಕ್ತವಾದ ಸ್ಥಳಾವಕಾಶವಾಗಿದೆ.

ಲೋಕರುಚಿ ಉಪಾಹಾರ ಮಂದಿರ

ಬೆಂಗಳೂರಿನ ಕಾಮತ್ ಹೋಟೆಲ್ ಸಮೂಹದವರು ಸುಮಾರು ಒಂದು ಎಕರೆ ಜಾಗದಲ್ಲಿ ಲೋಕರುಚಿ ಉಪಾಹಾರ ಮಂದಿರವನ್ನು ನಡೆಸುತ್ತಿದ್ದಾರೆ. ಶುಚಿ ಮತ್ತು ರುಚಿಗೆ ಹೆಸರಾದ ಈ ಉಪಾಹಾರ ಮಂದಿರದಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ, ಸೊಪ್ಪಿನ ಸಾರು, ಶಾವಿಗೆ- ಕಾಯಿಹಾಲು ಹೀಗೆ ಪ್ರಾದೇಶಿಕ ತಿಂಡಿ ತಿನಿಸುಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬಡಿಸಲಾಗುವುದು.

ಜಾನಪದ ಲೋಕದಲ್ಲಿ ದೊರೆಯಬಹುದಾದ ಅನುಕೂಲತೆಗಳು

  1. ಕಮ್ಮಟ-ಶಿಬಿರಗಳಿಗೆ, ಕಲಾವಿದರ, ಅತಿಥಿಗಳ ಊಟ ವಸತಿಗೆ ಮತ್ತು ಮದುವೆ ಉತ್ಸವಗಳಿಗೆ ‘ದೊಡ್ಡಮನೆ’ ಸಿದ್ಧವಿದೆ.
  2. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾದ ಅತ್ಯಾಧುನಿಕ ಶೌಚಾಲಯಗಳಿವೆ.
  3. ರುಚಿ ಮತ್ತು ಶುಚಿಗೆ ಹೆಸರಾದ ಬಾಳೆ ಎಲೆಯಲ್ಲಿ ಊಟ ನೀಡುವ ಕಾಮತ್ ಲೋಕರುಚಿ ಉಪಾಹಾರ ಮಂದಿರವಿದೆ
  4. ಕಾರ್ಪೊರೇಟ್ ಕಂಪನಿಗಳು ನಡೆಸುವ ಸಭೆ ಸಮಾರಂಭ ವಿಚಾರ ಸಂಕಿರಣ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಸುಸಜ್ಜಿತ ಸಭಾಂಗಣ ಹಾಗೂ ಬಯಲು ರಂಗಮಂದಿರದ ವ್ಯವಸ್ಥೆ ಇದೆ.
  5. ಅಧ್ಯಯನ ಮತ್ತು ಸಂಶೋಧನೆಯ ಸಲುವಾಗಿ ವಿದೇಶಿ ಯಾತ್ರಿಕರು ಮತ್ತು ದೇಶೀ ವಿದ್ವಾಂಸರು ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ.
  6. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬಯಲು ರಂಗಮಂದಿರದಲ್ಲಿ ವೈವಿಧ್ಯಮಯ ಜನಪದ ಕಲೆಗಳ ಪ್ರದರ್ಶನದ ವ್ಯವಸ್ಥೆ ಇದೆ.
  7. ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ತಡೆರಹಿತ ಬಸ್ ಹೊರತುಪಡಿಸಿ ಉಳಿದ ಎಲ್ಲಾ ಬಸ್‍ಗಳು ಜಾನಪದ ಲೋಕದ ಬಳಿ ನಿಲ್ಲುತ್ತವೆ.

ದಿನಾಂಕ ೦೧/೦೪/೨೦೧೩ ರಿಂದ ಅನ್ವಯವಾಗುವಂತೆ ಜಾನಪದ ಲೋಕದ ಪ್ರವೇಶದ ಪರಿಷೃತ ದರಪಟ್ಟಿ

ದಿನನಿತ್ಯದ ಟಿಕೆಟ್ ಪ್ರವೇಶ ದರಗಳು

  • ದೊಡ್ಡವರಿಗೆ ೧೦೦/-
  • ವಿದೇಶಿಗರಿಗೆ ೨೦೦/-
  • ೧೨ ವರ್ಷದ ಒಳಗಿನ ಮಕ್ಕಳು ೫೦/-

ವಿಶೇಷ ಪ್ಯಾಕೇಜ್ ಪ್ರವೇಶ ದರಗಳು

  • ೧೨ ವರ್ಷ ಮೇಲ್ಪಟ್ಟ ಮಕ್ಕಳು ೮೦/- ( ಶಾಲಾ ಕಾಲೇಜು ಮಕ್ಕಳು, ಗುರುತಿನ ಚೀಟಿ ಕಡ್ಡಾಯವಾಗಿ ತರುವುದು)
  • ಎಲ್ಲಾ ಶಾಲಾ ಪ್ಯಾಕೇಜ್‌ನಲ್ಲಿ ಬರುವ ೧೨ ವರ್ಷದೊಳಗಿನ ಮಕ್ಕಳು ೪೦/-
  • ಶಾಲಾ ಮಕ್ಕಳ ಜೊತೆ ಬರುವ ಟೀಚರ್/ಆಯಾ ಅವರಿಗೆ ೫೦/-
  • ಕ್ಯಾಮರಾ + ವೀಡಿಯೊ ಕ್ಯಾಮರಾ – 500 + ಜಿಎಸ್ಟಿ ಹೆಚ್ಚುವರಿ
  • ವಿವಾಹ ಪೂರ್ವ – ರೂ. 5000 + ಜಿಎಸ್ಟಿ
  • ಬೇಬಿ ಶೂಟ್ – ರೂ. 1000 + ಜಿಎಸ್ಟಿ
  • ಮಾಡೆಲಿಂಗ್ ಶೂಟ್ – ರೂ. 5000 +ಜಿಎಸ್ಟಿ
  • ಚಲನಚಿತ್ರ ಚಿತ್ರೀಕರಣ – ರೂ. 25000 + ಜಿಎಸ್ಟಿ
  • ಟಿವಿ ಸೀರಿಯಲ್ – ರೂ. 20000 + ಜಿಎಸ್ಟಿ

ವಿಶೇಷ ಸೂಚನೆ :

ಐಟಿ, ಬಿಟಿ ಮತ್ತು ಇತರ ಕಾರ್ಪೋರೇಟ್ ಕಂಪನಿಗಳು ಇಚ್ಚಿಸಿದ್ದಲ್ಲಿ ಜಾನಪದ ಲೋಕಕ್ಕೆ ಅವರನ್ನು ಕರೆತರುವ ಮತ್ತು ಹಿಂದಿರುಗಿ ಕರೆದೊಯ್ಯುವ ಪ್ಯಾಕೇಜ್ ಟೂರಿನ ಸೌಲಭ್ಯವನ್ನು ಏರ್ಪಡಿಸಲಾಗುವುದು. ಈ ಪ್ಯಾಕೇಜ್ ಸೌಲಭ್ಯದಲ್ಲಿ ಪ್ರಯಾಣ ವೆಚ್ಚ ಉತ್ತಮ ಊಟ ತಿಂಡಿ ವ್ಯವಸ್ಥೆ ಮತ್ತು ಜಾನಪದ ಲೋಕದ ವೀಕ್ಷಣೆ ಹಾಗೂ ಜನಪದ ಕಲೆಗಳ ಪ್ರದರ್ಶನವು ಸೇರಿರುತ್ತದೆ. ಪ್ಯಾಕೇಜ್ ಟೂರಿನ ವ್ಯವಸ್ಥೆಗಾಗಿ ಇಚ್ಛಿಸುವವರು ಹದಿನೈದು ದಿನಗಳ ಮೊದಲೇ ಕರ್ನಾಟಕ ಜಾನಪದ ಪರಿಷತ್ತನ್ನು ಸಂಪರ್ಕಿಸತಕ್ಕದ್ದು. Mobile : 9686601166