ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ದೇಶಹಳ್ಳಿಯಲ್ಲಿ 1923ರಲ್ಲಿ ಜನಿಸಿ, ಬಾಲ್ಯದಲ್ಲೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ, ಪ್ರೌಢಶಾಲಾ ಹಂತದಲ್ಲೇ ವಿದ್ಯೆಗೆ ವಿದಾಯ ಹೇಳಿ ನಾಡಿಗೆ ತಮ್ಮ ಬದುಕನ್ನು ಒಪ್ಪಿಸಿಕೊಂಡ ಶ್ರೀ ಜಿ. ನಾರಾಯಣ ಅವರು, 1964ರಲ್ಲಿ ಬೆಂಗಳೂರು ನಗರದ ಮೇಯರ್ ಆಗಿ, 1969ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, 1987ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ಅಧ್ಯಕ್ಷರಾಗಿ, 1992ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾದುದು.

ತೂಕದ ನಡೆ-ನುಡಿ, ಗಂಭೀರ ಶಿಸ್ತು, ಸರಳತೆ, ಪಕ್ವಗೊಂಡ ವಿಚಾರಧಾರೆ, ಸಂಯಮಪೂರ್ಣ ಮಾತು ಕಥೆ, ಸರ್ವರ ಮನಗೆಲ್ಲುವ ಉತ್ತಮ ನಡವಳಿಕೆಗಳಿಂದಾಗಿ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ನಾರಾಯಣ ಅವರದು. ಅವರು 1951ರಲ್ಲಿ ವಿನೋದ ಎಂಬ ಮಾಸಪತ್ರಿಕೆಯನ್ನು ಪ್ರಾರಂಭ ಮಾಡಿ ಕಳೆದ 55 ವರ್ಷಗಳಿಂದ ಹರಿಗಡಿಯದಂತೆ ಸಮರ್ಥವಾಗಿ ನಡೆಸಿಕೊಂಡು ಬಂದ ಪತ್ರಿಕಾ ಸಂಪಾದಕರು. ತಮ್ಮ ಅದ್ಭುತ ಸಂಘಟನಾ ಕ್ರಿಯಾಶೀಲತೆ, ದೂರದರ್ಶಿತ್ವ, ವೈಚಾರಿಕ ತಿಳುವಳಿಕೆಗಳಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಹೊಸ ದಿಕ್ಕನ್ನು ತೋರಿಸಿದರು. ಜಾನಪದದ ಬೆಳವಣಿಗೆಗೆ ಕ್ರಿಯಾತ್ಮಕ ಚಾಲನೆ ನೀಡಿ ಜನಪದ ಕಲೆಗಳಿಗೆ ಗೌರವ ತಂದುಕೊಟ್ಟ ಕೀರ್ತಿಗೆ ಭಾಜನರಾದರು. ಎಚ್.ಎಲ್.ನಾಗೇಗೌಡ, ಗೊ.ರು. ಚನ್ನಬಸಪ್ಪನವರ ಒತ್ತಾಸೆಯೊಂದಿಗೆ ನಾಡಿನಾದ್ಯಂತ ಜಿಲ್ಲಾ ಜಾನಪದ ಕಲಾಮೇಳಗಳನ್ನು ಸಂಘಟಿಸಿದರು. ಜನಪದ ಕಲೆಗಳನ್ನು ಉಳಿಸಬೇಕು; ಬೆಳೆಸಬೇಕೆನ್ನುವ ಚಿಂತನೆಗೆ ನಾರಾಯಣ ನೀರೆರೆದು ಪ್ರೋತ್ಸಾಹಿಸಿದರು. ನಾಡಿನಾದ್ಯಂತ ಇವರ ಅವಧಿಯಲ್ಲಿ ಜನಪದ ಕಲೆಗಳ ಪರಿವೀಕ್ಷಣೆ ನಡೆಯಿತು. ಉತ್ಸಾಹೀ ಯುವಕರ ದಂಡನ್ನೇ ಈ ಉಜ್ಜುಗಕ್ಕೆ ನಿಯೋಜಿಸಿದರು. ಜಿ.ನಾರಾಯಣ ಅವರು ಕೈಗೊಂಡ ಇಂತಹ ಪರಿವೀಕ್ಷಣೆಯ ಫಲವಾಗಿ, ಗೊ.ರು.ಚನ್ನಬಸವಪ್ಪನವರ ಸಂಪಾದಕತ್ವದಲ್ಲಿ `ಕರ್ನಾಟಕ ಜನಪದ ಕಲೆಗಳು’ ಪುಸ್ತಕ ಬೆಳಕು ಕಂಡಿತು. ಈ ಕ್ಷೇತ್ರದಲ್ಲಿ ಇದೇ ಪ್ರಥಮ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜನಪದ ಕಲೆಗಳ ಪರಿವೀಕ್ಷಣೆಯ ಜತೆಗೆ ನಾರಾಯಣ ಅವರು ಜನಪದ ಕಲೆಗಳ ಸಾಕ್ಷ್ಯ ಚಿತ್ವವನ್ನು ನಿರ್ಮಾಣ ಮಾಡಲೂ ಕಾರಣರಾದರು.

ಎಚ್.ಎಲ್.ನಾಗೇಗೌಡರು ಸರ್ಕಾರೀ ಸೇವೆಯಿಂದ ನಿವೃತ್ತರಾದಾಗ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭವನ್ನು ಏರ್ಪಡಿಸಿ, ನಿಧಿ ಅರ್ಪಿಸಲು ಕಾರಣರಾದ ಜಿ. ನಾರಾಯಣ ಅವರು ಕರ್ನಾಟಕ ಜಾನಪದ ಪರಿಷತ್ತಿನ ಉಗಮಕ್ಕೆ ಕಾರಣಕರ್ತರಾದರೆಂದರೆ ಅತಿಶಯೋಕ್ತಿಯಲ್ಲ. ಸಾಂಸ್ಥಿಕ ನೆಲೆಯಲ್ಲಿ ಜಾನಪದದ ಬೆಳವಣಿಗೆಗೆ ಕ್ರಿಯಾಶೀಲ ಪ್ರೋತ್ಸಾಹ ನೀಡಿ ಜಾನಪದ ಪ್ರವರ್ಧನೆಗೆ, ಜಾನಪದ ಸಂಘ ಸಂಸ್ಥೆಗಳ ಹುಟ್ಟಿಗೆ ಕಾರಣರಾಗಿರುವ ಜಿ.ನಾರಾಯಣ ಜಾನಪದ ಕ್ಷೇತ್ರ ಕಂಡ ಅತ್ಯುತ್ತಮ ಪ್ರವರ್ಧಕರಲ್ಲಿ ಒಬ್ಬರು.

ನಾರಾಯಣರ ನಿಸ್ವಾರ್ಥ ಸೇವೆಗೆ ಸಂದ ಗೌರವ ಪ್ರಶಸ್ತಿಗಳಿಗೆ ಲೆಕ್ಕ ಇಟ್ಟವರಿಲ್ಲ. 1971ರಲ್ಲಿ ರಾಜ್ಯೋತ್ಸವ ಪ್ರಶಸ್ತಿ , 1994ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, 1995ರಲ್ಲಿ ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 1996ರಲ್ಲಿ ಶ್ರೀನಿವಾಸರಾವ್ ಮಂಗಳವೇಢೆ ಸ್ಮಾರಕ ಕನ್ನಡಶ್ರೀ ಪ್ರಶಸ್ತಿ, 2004ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, 2006ರಲ್ಲಿ ಕರ್ನಾಟಕ ಸರ್ಕಾರದ ಏಕೀಕರಣ ಪ್ರಶಸ್ತಿಗಳು ಪ್ರಾಪ್ತವಾಗಿವೆ. ಕರ್ನಾಟಕ ಗಮಕ ಕಲಾ ಪರಿಷತ್ತು, ಕರ್ನಾಟಕ ಲೇಖಕಿಯರ ಸಂಘ, ಶಶಿ ಕಲಾವಿದರು, ಶಾರದಾ ವಿದ್ಯಾಪೀಠ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದ ಜಿ.ನಾರಾಯಣ ಅವರು ಕನ್ನಡನಾಡಿನ ಸಾಂಸ್ಕøತಿಕ ಲೋಕದಲ್ಲಿ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾರೆ.

ಶ್ರೀ ಟಿ ತಿಮ್ಮೇಗೌಡರು
ಶ್ರೀ ಟಿ ತಿಮ್ಮೇಗೌಡರು, ಹಿಂದಿನ ಅಧ್ಯಕ್ಷರು: ಕರ್ನಾಟಕ ಜಾನಪದ ಪರಿಷತ್ತು

ದೀರ್ಘಕಾಲ ರಾಜ್ಯ ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದು, ನಿವೃತ್ತ ಐ.ಎ.ಎಸ್ ಅಧಿಕಾರಿಗಳಾದ ಶ್ರೀಯುತ ಟಿ. ತಿಮ್ಮೇಗೌಡರು ಈ ಮೊದಲು ಜಾನಪದ ಪರಿಷತ್ತಿನ ಕಾರ್ಯಾಧ್ಯಕ್ಷರಾಗಿದ್ದರು.

ಮೂಲತ: ಮಂಡ್ಯ ಜಿಲ್ಲೆ ಮಂಗಲ ಗ್ರಾಮದ ರೈತ ಕುಟುಂಬದಿಂದ ಬಂದು, ಕಾಲೇಜು ಉಪನ್ಯಾಸಕರು, ಜಿಲ್ಲಾಧಿಕಾರಿಯಾಗಿ, ಸರ್ಕಾರದ ಹಲವು ಇಲಾಖೆಗಳ ನಿರ್ದೇಶಕರಾಗಿ, ಕಾರ್ಯದರ್ಶಿಯಾಗಿ, ಆಯುಕ್ತರಾಗಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ರಾಜ್ಯ ಮೂರನೇ ಹಣಕಾಸು ಆಯೋಗದ ಸದಸ್ಯರಾಗಿ ಹಾಗೂ ಮತ್ತಿತರ ಹತ್ತು ಹಲವು ಉನ್ನತ ಹುದ್ದೆಗಳಲ್ಲಿ ಇವರು ಸಲ್ಲಿಸಿರುವ ಸೇವೆ ಅನುಪಮವಾದುದು. ಅತ್ಯುನ್ನತ ಹುದ್ದೆಯಲ್ಲಿದ್ದರೂ ಬಹುವಿಧ ಸೇವಾಕಾರ್ಯಗಳಿಂದ ಜನತೆಯ ಪ್ರೀತಿಗೌರವಗಳಿಗೆ ಪಾತ್ರರಾಗಿರುವ ಇವರು, ಗ್ರಾಮೀಣ ಸಂಸ್ಕೃತಿಯ ನೆಲೆಯಾದ ಕರ್ನಾಟಕ ಜಾನಪದ ಪರಿಷತ್ತಿಗೆ ಹಲವಾರು ವಿವಿಧ ಕಾರ್ಯಕ್ರಮಗಳ ಯೋಜನೆಗಳಿಗೆ  ಚಾಲನೆ ನೀಡುವುದರ ಮೂಲಕ ಜಾನಪದ ಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ

ನಾಡೋಜ ಎಚ್,ಎಲ್ ನಾಗೇಗೌಡ ಕಲಾ ಶಾಲೆ ಮತ್ತು ನಾಡೋಜ ಎಚ್.ಎಲ್.ನಾಗೇಗೌಡ ಸಂಶೋಧನಾ ಕೇಂದ್ರ, ಮತ್ತು ಪ್ರವಾಸಿಗರಿಗೆ ಆಕರ್ಷಕವಾಗುವಂತೆ ಜಾನಪದ ಲೋಕದ ಆವರಣದಲ್ಲಿ ಕಲಾಕೃತಿಗಳನ್ನು ನಿರ್ಮಿಸಿ ಹಳ್ಳಿಯ ಸೊಬಗನ್ನು ಹೆಚ್ಚಿಸಿದ್ದಾರೆ. ಪರಿಷತ್ತಿನ ಜಿಲ್ಲಾ ಘಟಕಗಳಿಗೆ ಮಹತ್ವ ನೀಡಿ ಕರ್ನಾಟಕದ ಉದ್ದಗಲಕ್ಕೂ ನಾಗೇಗೌಡರು ಕಟ್ಟಿದ ಪರಿಷತ್ತಿನ ಕಾರ್ಯಕ್ರಮಗಳನ್ನು ವಿಸ್ತರಿಸಿದ್ದಾರೆ.

ಪ್ರೊ. ಹಿ.ಶಿ.ರಾಮಚಂದ್ರೇಗೌಡ